ಸಾರಾಂಶ
ನಾರ್ತ್ ಸೌಂಡ್(ಆ್ಯಂಟಿಗಾ): 2024ರ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ಗೆ ಸಾಕ್ಷಿಯಾದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಮಳೆ ಬಾಧಿತ ಸೂಪರ್-8 ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಆಸೀಸ್ 28 ರನ್ ಜಯಭೇರಿ ಬಾರಿಸಿದೆ.
ಇದರೊಂದಿಗೆ ಆಸ್ಟ್ರೇಲಿಯಾ ಸೂಪರ್-8ರ ಗುಂಪು 2ರಲ್ಲಿ ಅಂಕ ಖಾತೆ ತೆರೆದು, ಅಗ್ರಸ್ಥಾನ ಪಡೆದುಕೊಂಡಿತು.ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 8 ವಿಕೆಟ್‌ಗೆ 140 ರನ್ ಕಲೆಹಾಕಿತು. ರನ್ ಖಾತೆ ತೆರೆಯುವ ಮೊದಲೇ ತಂಜೀದ್ ಹಸನ್(00) ವಿಕೆಟ್ ಕಳೆದುಕೊಂಡ ಬಾಂಗ್ಲಾಕ್ಕೆ ನಾಯಕ ನಜ್ಮುಲ್ ಹೊಸೈನ್(41) ಹಾಗೂ ತೌಹೀದ್ ಹೃದೊಯ್(28 ಎಸೆತಗಳಲ್ಲಿ 40) ಆಸರೆಯಾದರು.
ಉಳಿದಂತೆ ಲಿಟನ್ ದಾಸ್(16), ತಸ್ಕೀನ್ ಅಹ್ಮದ್(ಔಟಾಗದೆ 13) ಎರಡಂಕಿ ಮೊತ್ತ ಕಲೆಹಾಕಿ ತಂಡವನ್ನು ಕಾಪಾಡಿದರು. 18ನೇ ಓವರ್‌ನ ಕೊನೆ ಎಸೆತಗಳಲ್ಲಿ ಮಹ್ಮೂದುಲ್ಲಾ, ಮಹೆದಿ ಹಸನ್, 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹೀದ್ ವಿಕೆಟ್ ಪಡೆಯುವ ಮೂಲಕ ಕಮಿನ್ಸ್ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಆಸೀಸ್ ಸುಲಭ ಗುರಿ ಬೆನ್ನತ್ತುವ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. 6.2 ಓವರಲ್ಲಿ 64 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಮತ್ತೆ ಪಂದ್ಯ ಶುರುವಾದರೂ 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಗಳಿಸಿದ್ದಾಗ ಮತ್ತೆ ಮಳೆರಾಯನ ಕಾಟ ಎದುರಾಯಿತು. ಆ ಬಳಿಕ ಮಳೆ ನಿಲ್ಲಲಿಲ್ಲ.
ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ 28 ರನ್‌ಗಳಿದಂದ ಮುಂದಿದ್ದ ಆಸೀಸ್ ಗೆಲುವು ತನ್ನದಾಗಿಸಿಕೊಂಡಿತು. ವಾರ್ನರ್ 35 ಎಸೆತಗಳಲ್ಲಿ ಔಟಾಗದೆ 53, ಟ್ರ್ಯಾವಿಸ್ ಹೆಡ್ 31 ರನ್ ಕೊಡುಗೆ ನೀಡಿದರು. ಸ್ಕೋರ್: ಬಾಂಗ್ಲಾದೇಶ 20 ಓವರಲ್ಲಿ 140/8 (ನಜ್ಮುಲ್ 41, ತೌಹೀದ್ 40, ಕಮಿನ್ಸ್ 3-29), ಆಸ್ಟ್ರೇಲಿಯಾ 11.2 ಓವರಲ್ಲಿ 100/2 (ವಾರ್ನರ್ 53*, ಹೆಡ್ 31, ರಿಶಾದ್ 2-23) ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್
08ನೇ ಜಯ: ಆಸೀಸ್ ಟಿ20 ವಿಶ್ವಕಪ್‌ನಲ್ಲಿ(2022-2024) ಸತತ 8ನೇ ಗೆಲುವು ದಾಖಲಿಸಿತು. ಇದು ಟೂರ್ನಿಯಲ್ಲಿ ಯಾವುದೇ ತಂಡಗಳ ಪೈಕಿ ಗರಿಷ್ಠ. 2010-12ರಲ್ಲಿ ಇಂಗ್ಲೆಂಡ್, 2012-14ರಲ್ಲಿ ಭಾರತ ತಲಾ 7 ಪಂದ್ಯಗಳಲ್ಲಿ ಸತತವಾಗಿ ಗೆದ್ದಿದ್ದವು.
04ನೇ ಬೌಲರ್: ಅಂತಾರಾಷ್ಟ್ರೀಯ ಟಿ20ಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ 4ನೇ ಆಸೀಸ್ ಬೌಲರ್ ಕಮಿನ್ಸ್. ಬ್ರೆಟ್ ಲೀ, ಆಸ್ಟನ್ ಏಗರ್, ನೇಥನ್ ಎಲ್ಲಿಸ್ ಇತರ ಸಾಧಕರು.