ನ್ಯೂಜೆರ್ಸಿ(ಅಮೆರಿಕ): ಹತ್ತಾರು ದಾಖಲೆ, ಹಲವು ಅಚ್ಚರಿಯ ಫಲಿತಾಂಶ, ಅದ್ಭುತ ಕಮ್‌ಬ್ಯಾಕ್, ದಿಟ್ಟ ಹೋರಾಟ, ಹಲವು ಭಾವನಾತ್ಮಕ ಕ್ಷಣಗಳು ಹಾಗೂ ಭಾರೀ ವಿವಾದಗಳಿಗೆ ಸಾಕ್ಷಿಯಾದ 23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ತೆರೆ ಬಿದ್ದಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ 39 ದಿನಗಳ ಕಾಲ ನಡೆದ ಜಾಗತಿಕ ಫುಟ್ಬಾಲ್ ಮಹಾಸಂಗಮ, ಭಾನುವಾರ ಮಧ್ಯರಾತ್ರಿ ಅರ್ಜೆಂಟೀನಾ ಹಾಗೂ ಸ್ಪೇನ್ ನಡುವಿನ ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಂಡಿತು.
ಜೂ.11ರಂದು ಮೆಕ್ಸಿಕೋದಲ್ಲಿ ಈ ವಿಶ್ವಕಪ್‌ನ ಮೊದಲ ಪಂದ್ಯ ನಡೆದಿತ್ತು. ಬಳಿಕ 3 ದೇಶಗಳ ಒಟ್ಟು 16 ಕ್ರೀಡಾಂಗಣಗಳಲ್ಲಿ 104 ಪಂದ್ಯಗಳು ಆಯೋಜನೆಗೊಂಡವು. ಈ ಹಿಂದಿನ ವಿಶ್ವಕಪ್‌ವರೆಗೂ ತಂಡಗಳ ಸಂಖ್ಯೆ 32 ಇದ್ದರೆ, ಈ ಬಾರಿ ದಾಖಲೆಯ 48 ತಂಡಗಳು ಪಾಲ್ಗೊಂಡವು. 4 ಬಾರಿ ಚಾಂಪಿಯನ್ ಜರ್ಮನಿ, 3 ರನ್ನರ್-ಅಪ್ ನೆದರ್‌ಲೆಂಡ್ಸ್ ತಂಡಗಳು ಅಂತಿಮ 32ರ ಸುತ್ತಿನಲ್ಲೇ ಹೊರಬಿದ್ದರೆ, ದಾಖಲೆಯ 5 ಬಾರಿ ಚಾಂಪಿಯನ್ ಬ್ರೆಜಿಲ್, ಕ್ರಿಸ್ಟಿಯಾನೊ ರೊನಾಲ್ಡೋ ಅವರ ಪೋರ್ಚುಗಲ್ ಸೇರಿ ಪ್ರಮುಖ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದವು. ಆತಿಥೇಯ 3 ದೇಶಗಳು ಕೂಡಾ ಅಂತಿಮ 16ರ ಸುತ್ತಿನಲ್ಲಿ ಸೋತು ಹೊರಬಿದ್ದವು. ಸತತ 3ನೇ ಬಾರಿ ಫೈನಲ್‌ಗೇರುವ ವಿಶ್ವಾಸದಲ್ಲಿದ್ದ ಫ್ರಾನ್ಸ್ ತಂಡ ಸೆಮಿಫೈನಲ್‌ನಲ್ಲಿ ಸೋತು, 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಾಂತ್ರಿಕ ಫುಟ್ಬಾಲಿಗರು ಇನ್ನು ವಿಶ್ವಕಪ್‌ಗಿಲ್ಲ!
ಈ ವಿಶ್ವಕಪ್ ಹಲವು ದಿಗ್ಗಜ ಆಟಗಾರರ ಸಮಾಗಮಕ್ಕೆ ಸಾಕ್ಷಿಯಾಯಿತು. ಜೊತೆಗೆ ಹಲವರ ವಿದಾಯದ ಟೂರ್ನಿಯಾಗಿ, ಅಭಿಮಾನಿಗಳ ಪಾಲಿಗೆ ನಿರಾಸೆಯ ವಿಶ್ವಕಪ್ ಎನಿಸಿಕೊಂಡಿತು. 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಇದು ತಮ್ಮ ಕೊನೆ ವಿಶ್ವಕಪ್ ಎಂದು ಈಗಾಗಲೇ ಘೋಷಿಸಿದ್ದಾರೆ. 39 ವರ್ಷದ ಲಿಯೋನಲ್ ಮೆಸ್ಸಿಗೂ ಇದು ಕೊನೆ ವಿಶ್ವಕಪ್ ಆಗುವುದು ಬಹುತೇಕ ಖಚಿತ. ಗಾಯದ ಸಮಸ್ಯೆ ಎದುರಿಸುತ್ತಿರುವ 34 ವರ್ಷದ ನೇಯ್ಮರ್ ಮುಂದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ. ಉಳಿದಂತೆ ಕ್ರೊವೇಷಿಯಾದ ಲ್ಯುಕಾ ಮೋಡ್ರಿಚ್, ನೆದರ್‌ಲೆಂಡ್ಸ್‌ನ ವ್ಯಾನ್ ಡಿಜಿಕ್ ಸೇರಿದಂತೆ ಕೆಲ ಆಟಗಾರರು ಕೂಡಾ ಬಹುತೇಕ ಕೊನೆ ವಿಶ್ವಕಪ್ ಆಡಿದರು.
ಈ ವಿಶ್ವಕಪ್‌ನ 5 ಪ್ರಮುಖ ವಿವಾದಗಳು
1. ರೆಫ್ರಿಗೆ ಅಮೆರಿಕ ಪ್ರವಾಸ ನಿರಾಕರಣೆ
ಈ ಬಾರಿ ವಿಶ್ವಕಪ್‌ನಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಬೇಕಿದ್ದ ಸೊಮಾಲಿಯಾದ ಪ್ರಶಸ್ತಿ ವಿಜೇತ ರೆಫ್ರಿ ಒಮರ್ ಆರ್ತನ್ ಅವರಿಗೆ ಅಮೆರಿಕ ಪ್ರವೇಶಕ್ಕೆ ವೀಸಾ ನಿರಾಕರಿಸಲಾಯಿತು. ಮಿಯಾಮಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು.
2. ಪಂದ್ಯಗಳ ಟಿಕೆಟ್ ಬೆಲೆ ಅತಿ ದುಬಾರಿ
ಈ ಬಾರಿ ವಿಶ್ವಕಪ್ ಪಂದ್ಯಗಳ ಟಿಕೆಟ್ ಅತಿ ದುಬಾರಿಯಾಗಿತ್ತು. ಗುಂಪು ಹಂತದ ಪಂದ್ಯಗಳ ಟಿಕೆಟ್ ಬೆಲೆ ₹13500 ರಿಂದ ₹2.63 ಲಕ್ಷದವರೆಗೂ ಇದ್ದವು. ಫೈನಲ್ ಪಂದ್ಯದ ಟಿಕೆಟ್‌ಗಳ ಬೆಲೆ ₹72 ಲಕ್ಷದವರೆಗೂ ಇತ್ತು. ಕೆಲ ಟಿಕೆಟ್‌ಗಳು ಕೋಟ್ಯಂತರು ರುಪಾಯಿಗೆ ಮರು ಮಾರಾಟಗೊಂಡಿವೆ.
3. ವಿವಾದಾತ್ಮಕ ವಿಎಆರ್, ರೆಫ್ರಿ ತೀರ್ಪು
ಈ ವಿಶ್ವಕಪ್‌ನಲ್ಲಿ ಪಾರದರ್ಶಕ ಫಲಿತಾಂಶ ನೀಡಲು ಎಷ್ಟೇ ತಂತ್ರಜ್ಞಾನವನ್ನು ಬಳಸಿದರೂ ರೆಫ್ರಿಗಳು, ವಿಎಆರ್ ತೀರ್ಪುಗಳ ವಿಚಾರದಲ್ಲಿ ವಿವಾದಗಳೇನೂ ಕಡಿಮೆ ಇರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ, ರೆಫ್ರಿಗಳು ಹಾಗೂ ಫಿಫಾ ಕೂಡಾ ನಿರ್ದಿಷ್ಟ ತಂಡಗಳ ಪರವಾಗಿವೆ ಎಂಬ ಆರೋಪಗಳೂ ಕೇಳಿಬಂದವು.
4. ಆಟಗಾರರಿಗೆ ಜನಾಂಗೀಯ ನಿಂದನೆ
ಫುಟ್ಬಾಲ್‌ನಲ್ಲಿ ಜನಾಂಗೀಯ ನಿಂದನೆ ಪ್ರಕರಣಗಳು ಸಾಮಾನ್ಯ. ಅದು ಈ ವಿಶ್ವಕಪ್‌ನಲ್ಲೂ ಮರುಕಳಿಸಿದವು. ಕ್ರೀಡಾಂಗಣದಲ್ಲಿ ಕಪ್ಪು ವರ್ಣದ ಆಟಗಾರರನ್ನು ನೇರವಾಗಿ ಗುರಿಯಾಗಿಸಿದ್ದು ಮಾತ್ರವಲ್ಲದೇ, ಸಾಮಾಜಿಕ ತಾಣಗಳಲ್ಲೂ ಜನಾಂಗೀಯಾವಾಗಿ ನಿಂದಿಸಿದ ಪ್ರಕರಣಗಳು ಕಂಡುಬಂದವು.
5. ರೆಫ್ರಿ ತೀರ್ಪಿನಲ್ಲಿ ಟ್ರಂಪ್ ಹಸ್ತಕ್ಷೇಪ
ಅಮೆರಿಕ ಆಟಗಾರ ಫೊಲಾರಿನ್ ಬಾಲೋಗನ್‌ಗೆ ಬೋಸ್ನಿಯಾ ವಿರುದ್ಧ ಪಂದ್ಯದಲ್ಲಿ ರೆಫ್ರಿಗಳು ರೆಡ್ ಕಾರ್ಡ್ ನೀಡಿದ್ದರು. ಹೀಗಾಗಿ ಅವರು ಪ್ರಿ ಕ್ವಾರ್ಟರ್ ಪಂದ್ಯ ಆಡುವಂತಿರಲಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಪ್ರಭಾವ ಬಳಸಿ, ಬಾಲೋಗನ್ ರೆಡ್ ಕಾರ್ಡ್ ಹಿಂಪಡೆದರು. ಇದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಹಲವು ಮಹತ್ವದ ಸನ್ನಿವೇಶಗಳಿಗೆ ವಿಶ್ವಕಪ್ ಸಾಕ್ಷಿ
1. ಯಂಗ್ ಟ್ಯಾಲೆಂಟ್ vs ಲೆಜೆಂಡ್ಸ್ ಮುಖಾಮುಖಿ
ಮೆಸ್ಸಿ, ರೊನಾಲ್ಡೊ, ನೇಯ್ಮರ್ ಸೇರಿದಂತೆ ಕೊನೆ ವಿಶ್ವಕಪ್ ಆಡುತ್ತಿರುವ ಫುಟ್ಬಾಲ್ ದಿಗ್ಗಜರು ಹಾಗೂ ಯಮಲ್, ಕುಬಾರ್ಸಿ ಸೇರಿದಂತೆ ಯುವ ಪ್ರತಿಭೆಗಳ ಮುಖಾಮುಖಿ ಈ ವಿಶ್ವಕಪ್‌ನಲ್ಲಿ ನಡೆಯಿತು. ಮೆಸ್ಸಿ 19 ವರ್ಷದ ಹಿಂದೆ ಎತ್ತಿ ಆಡಿಸಿದ್ದ ಯಮಲ್, ಇಂದು ಅವರಿಗೇ ಫೈನಲ್‌ನಲ್ಲಿ ಎದುರಾಳಿಯಾಗಿದ್ದು ರೋಚಕ ಕ್ಷಣಗಳಲ್ಲಿ ಒಂದು.
2. 39ನೇ ವಯಸ್ಸಲ್ಲೂ ಮೆಸ್ಸಿ ಅದ್ವಿತೀಯ ಆಟ
ವಯಸ್ಸಾದಂತೆ ಆಟಗಾರರ ಪ್ರದರ್ಶನವೂ ಕಡಿಮೆಯಾಗುವುದು ಸಹಜ. ಆದರೆ 39 ವರ್ಷದ ಮಾಂತ್ರಿಕ ಫುಟ್ಬಾಲಿಗ ಮೆಸ್ಸಿ ಯುವ ಪ್ರತಿಭೆಯಂತೆ ಪ್ರದರ್ಶನ ನೀಡಿದರು. ಗುಂಪು ಹಂತದಿಂದ ಸೆಮಿಫೈನಲ್‌ವರೆಗೆ ಅವರಿಂದ 8 ಗೋಲು ದಾಖಲಾದವು. 4 ಬಾರಿ ಗೋಲು ಗಳಿಸಲು ನೆರವು(ಅಸಿಸ್ಟ್) ನೀಡಿದರು.
3. ಕಮ್‌ಬ್ಯಾಕ್ ಮೂಲಕ ಅರ್ಜೆಂಟೀನಾ ಜಾದೂ
2022ರ ಚಾಂಪಿಯನ್ ಅರ್ಜೆಂಟೀನಾ ಈ ಬಾರಿ ಗುಂಪು ಹಂತದ ಬಳಿಕ ಪ್ರದರ್ಶಿಸಿದ್ದು ಅತ್ಯದ್ಭುತ ಕಮ್‌ಬ್ಯಾಕ್. ಕೇಪ್ ವರ್ಡೆ, ಈಜಿಪ್ಟ್, ಸ್ವಿಜರ್‌ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಪಂದ್ಯಗಳಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದರೂ ಕೊನೆ ಕ್ಷಣದಲ್ಲಿ ಅಮೋಘ ಆಟ ಪ್ರದರ್ಶಿಸಿ ಗೆಲುವು ತನ್ನದಾಗಿಸಿಕೊಂಡಿತು.
4. 27ನೇ ವಯಸಲ್ಲೇ ಎಂಬಾಪೆ ಗರಿಷ್ಠ ಸ್ಕೋರರ್
ಮೆಸ್ಸಿ 6 ವಿಶ್ವಕಪ್ ಆಡಿ 33 ಪಂದ್ಯಗಳಲ್ಲಿ 21 ಗೋಲು(ಸೆಮಿಫೈನಲ್‌ವರೆಗೆ) ಬಾರಿಸಿದ್ದಾರೆ. ಆದರೆ ಇದನ್ನು ಕೇವಲ ತಮ್ಮ 3ನೇ ವಿಶ್ವಕಪ್‌ನಲ್ಲೇ 27 ವರ್ಷದ ಎಂಬಾಪೆ ಹಿಂದಿಕ್ಕಿದ್ದಾರೆ. 22 ಪಂದ್ಯಗಳಲ್ಲಿ 22 ಗೋಲು ಗಳಿಸಿರುವ ಅವರು ಈಗ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸ್ಕೋರರ್ ಎಂಬ ದಾಖಲೆ ಬರೆದಿದ್ದಾರೆ.
5. ಪುಟ್ಟ ದೇಶ ಕೇಪ್ ವರ್ಡೆಯಿಂದ ದಿಟ್ಟ ಹೋರಾಟ
ಈ ವಿಶ್ವಕಪ್‌ನಲ್ಲಿ ಅನಿರೀಕ್ಷಿತ ಎಂಬಂತೆ ಹಲವು ತಂಡಗಳು ಕೆಚ್ಚೆದೆಯ ಆಟ ಪ್ರದರ್ಶಿಸಿದವು. ಅದರಲ್ಲೂ ಕೇಪ್ ವರ್ಡೆ ತಂಡದ ಸಾಧನೆ ಯಾರೂ ಮರೆಯುವಂತಿಲ್ಲ. ಫೈನಲಿಸ್ಟ್‌ಗಳಾದ ಸ್ಪೇನ್, ಅರ್ಜೆಂಟೀನಾ ತಂಡಗಳನ್ನೂ ಇನ್ನಿಲ್ಲದಂತೆ ಕಾಡಿದ ಕೇಪ್ ವರ್ಡೆ, ಫುಟ್ಬಾಲ್ ಲೋಕದ ಗಮನ ಸೆಳೆಯಿತು.
ಮುಂದಿನ ಸಲ ವಿಶ್ವಕಪ್‌ಗೆ ಶತಮಾನ
ಸ್ಪೇನ್, ಪೋರ್ಚುಗಲ್, ಮೊರಾಕ್ಕೋದಲ್ಲಿ 2030ರ ವಿಶ್ವಕಪ್
1930ರಲ್ಲಿ ಆರಂಭಗೊಂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಮುಂದಿನ ಆವೃತ್ತಿಯಲ್ಲಿ 100 ವರ್ಷ ಪೂರೈಸಲಿದೆ. ಈ ವಿಶ್ವಕಪ್ ಆತಿಥ್ಯಕ್ಕೆ ಈಗಾಗಲೇ ದೇಶಗಳ ಆಯ್ಕೆ ಕೂಡಾ ನಡೆದಿವೆ. ಸ್ಪೇನ್, ಪೋರ್ಚುಗಲ್ ಹಾಗೂ ಮೊರಾಕ್ಕೊ ದೇಶಗಳು ಟೂರ್ನಿಗೆ ಆತಿಥ್ಯ ವಹಿಸಲಿವೆ. ಶತಮಾನೋತ್ಸವದ ಅಂಗವಾಗಿ, 1930ರ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಉರುಗ್ವೆಯ ಮಾಂಟೆವಿಡಿಯೊ ಎಂಬಲ್ಲಿರುವ ಎಸ್ಟಾಡಿಯೊ ಸೆಂಟೆನಾರಿಯೊದಲ್ಲಿ ವಿಶೇಷ ಪಂದ್ಯ ಮತ್ತು ಸಂಭ್ರಮಾಚರಣೆ ನಡೆಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿರುವ ಎಸ್ಟಾಡಿಯೊ ಮೊನ್ಯುಮೆಂಟಲ್ ಮತ್ತು ಪರಗ್ವೆಯ ಅಸುನ್ಸಿಯೋನ್‌ನಲ್ಲಿರುವ ಎಸ್ಟಾಡಿಯೊ ಓಸ್ವಾಲ್ಡೊ ಡೊಮಿಂಗ್ಯೂಜ್ ಡಿಬ್ ಕ್ರೀಡಾಂಗಣಗಳಲ್ಲಿ ತಲಾ ಒಂದೊಂದು ಪಂದ್ಯವನ್ನು ಆಯೋಜಿಸಲು ಫಿಫಾ ನಿರ್ಧರಿಸಿದೆ. ತಂಡಗಳ ಸಂಖ್ಯೆ ಈಗಿರುವಂತೆ 48 ಇರಲಿದೆಯೋ ಅಥವಾ 60ಕ್ಕೆ ಏರಿಕೆಯಾಗಲಿದೆಯೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
307 ಗೋಲು
ಈ ವಿಶ್ವಕಪ್‌ನ ಫೈನಲ್‌ಗೂ ಮುನ್ನ ಒಟ್ಟು 307 ಗೋಲು ದಾಖಲಾಗಿವೆ. ಇದು ಗರಿಷ್ಠ. ಕಳೆದ ವಿಶ್ವಕಪ್‌ನಲ್ಲಿ 172 ಗೋಲು ದಾಖಲಾಗಿತ್ತು.
01 ತಂಡ
ಈ ವಿಶ್ವಕಪ್‌ನ 48 ತಂಡಗಳ ಪೈಕಿ 41 ತಂಡಗಳು ಕನಿಷ್ಠ ಒಂದು ಗೋಲು ದಾಖಲಿಸಿವೆ. ಪನಾಮ ಮಾತ್ರ ಒಂದೂ ಗೋಲು ಹೊಡೆದಿಲ್ಲ.
20 ಗೋಲು
2026ರ ವಿಶ್ವಕಪ್‌ನಲ್ಲಿ ಫ್ರಾನ್ಸ್, ಇಂಗ್ಲೆಂಡ್ ತಲಾ 20 ಗೋಲು ಗಳಿಸಿವೆ. ಈ ತಂಡಗಳ ನಡುವಿನ 3ನೇ ಸ್ಥಾನದ ಪಂದ್ಯದಲ್ಲೇ 10 ಗೋಲು ದಾಖಲಾದವು.
