ಸಾರಾಂಶ
ಭಾರತ ಭಾನುವಾರ ಆಡಿದ 2 ಪಂದ್ಯದಲ್ಲೂ ಜಯಗಳಿಸಿತು. ಡಬಲ್ಸ್‌ನಲ್ಲಿ ಯೂಕಿ ಬ್ಹಾಂಬ್ರಿ-ಸಾಕೇತ್ ಮೈನೀನಿ, ರಿವರ್ಸ್ ಸಿಂಗಲ್ಸ್‌ನಲ್ಲಿ ನಿಕಿ ಪೂನಚ್ಚ ಜಯಭೇರಿ ಬಾರಿಸಿದರು. 5ನೇ ಪಂದ್ಯ ನಡೆಯಲಿಲ್ಲ.
ಇಸ್ಲಾಮಾಬಾದ್: 60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಡೇವಿಸ್ ಕಪ್ ಟೆನಿಸ್ ಆಡಲು ತೆರಳಿದ್ದ ಭಾರತ ತಂಡ 4-0 ಅದ್ವಿತೀಯ ಜಯಭೇರಿ ಬಾರಿಸಿದೆ. ಇದರೊಂದಿಗೆ ಭಾರತ ವಿಶ್ವ ಗುಂಪು-1ರಲ್ಲೇ ಮುಂದುವರಿಯಲಿದ್ದು, ಪಾಕಿಸ್ತಾನ ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆಯಲಿದೆ.ವಿಶ್ವ ಗುಂಪು-1 ಪ್ಲೇ ಆಫ್‌ನ ಮೊದಲ ದಿನವಾದ ಶನಿವಾರ 2-0 ಅಂತರದಲ್ಲಿ ಮುನ್ನಡೆ ಪಡೆದಿದ್ದು, ಭಾರತ ಭಾನುವಾರ ಆಡಿದ 2 ಪಂದ್ಯದಲ್ಲೂ ಜಯಗಳಿಸಿತು. ಡಬಲ್ಸ್‌ನಲ್ಲಿ ಯೂಕಿ ಬ್ಹಾಂಬ್ರಿ-ಸಾಕೇತ್ ಮೈನೀನಿ ಜೋಡಿ ಮುಝಮ್ಮಿಲ್ ಮುರ್ತಜಾ-ಅಖೀಲ್ ಖಾನ್ ವಿರುದ್ಧ 6-2, 7-6(5) ಅಂತರದಲ್ಲಿ ಗೆಲುವು ಸಾಧಿಸಿತು. ಬಳಿಕ ರಿವರ್ಸ್ ಸಿಂಗಲ್ಸ್‌ನಲ್ಲಿ ನಿಕಿ ಪೂನಚ್ಚ ಅವರು ಮೊಹಮದ್ ಶೋಯೆಬ್ ವಿರುದ್ಧ 6-3, 6-4ರಲ್ಲಿ ಜಯಭೇರಿ ಬಾರಿಸಿದರು. 5ನೇ ಪಂದ್ಯ ನಡೆಯಲಿಲ್ಲ.
8-0 ಕ್ಲೀನ್‌ಸ್ವೀಪ್: ಪಾಕ್ ವಿರುದ್ಧ ಭಾರತ ಗೆಲುವಿನ ಓಟವನ್ನು 8-0ಗೆ ವಿಸ್ತರಿಸಿತು. ಈ ಮೊದಲು 1962, 1963, 1964, 1970, 1973, 2006, 2019ರಲ್ಲಿ ಭಾರತವೇ ಗೆದ್ದಿತ್ತು. ಈ ಪೈಕಿ 1962, 1964ರ ಪಂದ್ಯಗಳು ನಡೆದಿದ್ದು ಪಾಕಿಸ್ತಾನದಲ್ಲಿ.