ಭಾರತ vs ಕಿವೀಸ್‌ ಮೊದಲ ಟೆಸ್ಟ್‌: ಜಡಿ ಮಳೆಗೆ ಮೊದಲ ದಿನದಾಟ ಬಲಿ

| Published : Oct 17 2024, 01:33 AM IST

ಸಾರಾಂಶ

ಬೆಂಗಳೂರಲ್ಲಿ ನಿಲ್ಲದ ಮಳೆ. ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ನ ಮೊದಲ ದಿನದಾಟ ರದ್ದು. ಇನ್ನೂ ಟಾಸ್‌ ಕೂಡ ಕಾಣದ ಪಂದ್ಯ. 2ನೇ ದಿನವೂ ಮಳೆ ಕಾಟ ಬಹುತೇಕ ಖಚಿತ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಎರಡು ದಿನಗಳಿಂದ ನಗರಾದದ್ಯಾಂತ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಳ್ಳಬೇಕಿದ್ದ ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ ವಿಳಂಬಗೊಂಡಿದೆ. ಜಡಿ ಮಳೆಯಿಂದಾಗಿ, ಮೊದಲ ದಿನದಾಟ ರದ್ದಾಯಿತು. ಪಂದ್ಯ ಇನ್ನೂ ಟಾಸ್‌ ಕೂಡ ಕಂಡಿಲ್ಲ.

ಮಂಗಳವಾರದಿಂದಲೇ ಮಳೆ ಸುರಿಯುತ್ತಿರುವ ಕಾರಣ, ಮೈದಾನ ಸಂಪೂರ್ಣ ಒದ್ದೆಯಾಗಿ, ಅಲ್ಲಲ್ಲಿ ನೀರು ನಿಂತಿರುವುದು ಕಂಡು ಬಂತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ, ಮಳೆ ನಿಂತ 20 ನಿಮಿಷಗಳಲ್ಲಿ ಆಟ ಶುರು ಮಾಡಬಹುದು. ಆದರೆ, ಮಳೆ ಬಿಡುವೇ ನೀಡದ ಕಾರಣ ಏನೇ ತಂತ್ರಜ್ಞಾನವಿದ್ದರೂ ಆಟ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅಂಪೈರ್‌ಗಳು ಮಧ್ಯಾಹ್ನ 2.34ಕ್ಕೆ ದಿನದಾಟವನ್ನು ರದ್ದುಗೊಳಿಸಿದರು.

ಮಳೆ ನಡುವೆಯೂ ನೂರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ಅವರಿಗೆಲ್ಲ ಸಿಕ್ಕ ಏಕೈಕ ಖುಷಿ ಕ್ಷಣವೆಂದರೆ, ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್‌ ಮೈದಾನಕ್ಕೆ ಪ್ರವೇಶಿಸಿ, ಒಳಾಂಗಣ ನೆಟ್ಸ್‌ನತ್ತ ನಡೆದು ಹೋದರು. ಇದನ್ನು ಹೊರತುಪಡಿಸಿ, ಅಭಿಮಾನಿಗಳು ಇಡೀ ದಿನ ಮಳೆಯನ್ನು ನೋಡುತ್ತ ಕೂರಬೇಕಾಯಿತು.

ಇಂದಿನ ಮಳೆ ಕಾಟ?

ಗುರುವಾರವೂ ಸಹ ಮಳೆ ಬೀಳುವ ಸಾಧ್ಯತೆ 80% ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 2ನೇ ದಿನದಾಟವೂ ರದ್ದುಗೊಂಡರೆ ಅಚ್ಚರಿಯಿಲ್ಲ. ಗುರುವಾರ ಬೆಳಗ್ಗೆ 8.45ಕ್ಕೆ ಟಾಸ್‌ ನಿಗದಿಯಾಗಿದ್ದು, 9.15ಕ್ಕೆ ಪಂದ್ಯವನ್ನು ಆರಂಭಿಸಲು ಅಂಪೈರ್‌ಗಳು ನಿರ್ಧರಿಸಿದ್ದಾರೆ.

--