ಸಾರಾಂಶ
ನವದೆಹಲಿ: ದೇಶದ ಹಲವು ನಟಿಯರು ಸೇರಿದಂತೆ ಅನೇಕರ ನಿದ್ದೆಗೆಡಿಸಿದ್ದ ಡೀಪ್ ಫೇಕ್, ಇದೀಗ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನೂ ಕಾಡಿದೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿನ್, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.
‘ಸ್ಕೈವಾರ್ಡ್ ಏವಿಯೇಟರ್ ಕ್ವೆಸ್ಟ್’ ಹೆಸರಿನ ನಕಲಿ ಆ್ಯಪ್‌ಗೆ ಸಚಿನ್‌ರ ವಿಡಿಯೋ ಬಳಕೆಯಾಗಿದ್ದು, ಸುಲಭವಾಗಿ ಹಣ ಮಾಡುವ ಬಗ್ಗೆ ಆ್ಯಪ್ ಮೂಲಕ ಆಮಿಷವೊಡ್ಡಲಾಗಿದೆ.
ವಿಡಿಯೋದಲ್ಲಿ ಸಚಿನ್‌ರ ಮುಖ ಬಳಕೆ ಮಾಡಲಾಗಿದ್ದು ‘ಹಣ ಗಳಿಸುವುದು ಇಷ್ಟು ಸುಲಭ ಎಂದು ನನಗೂ ಗೊತ್ತಿರಲಿಲ್ಲ. ನನ್ನ ಮಗಳೂ (ಸಾರಾ) ಈ ಆ್ಯಪ್ ಬಳಸುತ್ತಾಳೆ’ ಎಂದು ಸಚಿನ್‌ರ ಧ್ವನಿಯಲ್ಲೇ ಹೇಳಲಾಗಿದೆ.
ನಕಲಿ ಆ್ಯಪ್‌ಗಳನ್ನು ಬಳಸದಂತೆ ಸಚಿನ್ ಮನವಿ ಮಾಡಿದ್ದು, ಇಂತಹ ಪ್ರಕರಣಗಳಲ್ಲಿ ಸಾಮಾಜಿಕ ತಾಣಗಳು ಎಚ್ಚರಿಕೆ ವಹಿಸಬೇಕು ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಕೇಂದ್ರ ಸಚಿವ ಆರ್‌ಸಿಯಿಂದ ಕಠಿಣ ನಿಯಮದ ಭರವಸೆ: ಸಚಿನ್‌ರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್, ‘ಈ ಪ್ರಕರಣವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ. ಸದ್ಯದಲ್ಲೇ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ’ ಎಂದಿದ್ದಾರೆ.