ರಾಜ್ಯವನ್ನು ಹೊಡೆದಟ್ಟಿದ ಹೂಡಾ!

| Published : Dec 15 2023, 01:30 AM IST

ಸಾರಾಂಶ

ಭಾರತ ತಂಡದಿಂದ ಹೊರಬಿದ್ದಿರುವ Deepak Hooda, ವಿಜಯ್‌ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಅಮೋಘ ಇನ್ನಿಂಗ್ಸ್‌ ಮೂಲಕ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್‌ ಜಯದೊಂದಿಗೆ ರಾಜಸ್ಥಾನವನ್ನು ಹೂಡಾ ಫೈನಲ್‌ಗೆ ಕೊಂಡೊಯ್ದರು.

- ಕರ್ನಾಟಕಕ್ಕೆ ಸತತ 2ನೇ ವರ್ಷ ಸೆಮಿಫೈನಲ್‌ನಲ್ಲಿ ಆಘಾತರಾಜ್‌ಕೋಟ್‌: ಭಾರತ ತಂಡದಿಂದ ಹೊರಬಿದ್ದಿರುವ ದೀಪಕ್‌ ಹೂಡಾ, ವಿಜಯ್‌ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಅಮೋಘ ಇನ್ನಿಂಗ್ಸ್‌ ಮೂಲಕ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್‌ ಜಯದೊಂದಿಗೆ ರಾಜಸ್ಥಾನವನ್ನು ಹೂಡಾ ಫೈನಲ್‌ಗೆ ಕೊಂಡೊಯ್ದರು.ಒಬ್ಬ ತಜ್ಞ ಬೌಲರ್ ಕೊರತೆಯೊಂದಿಗೆ ಆಡಿದ ಕರ್ನಾಟಕ ತಕ್ಕ ಬೆಲೆ ತೆರಬೇಕಾಯಿತು. ಆಲ್ರೌಂಡರ್‌ ಮನೋಜ್‌ ಭಾಂಡ್ಗೆಯನ್ನು 5ನೇ ಬೌಲರ್‌ ಆಗಿ ಬಳಸುವ ರಾಜ್ಯದ ಯೋಜನೆ ಕೈಹಿಡಿಯಲಿಲ್ಲ. ಇದರಿಂದಾಗಿ ತಂಡ ಸತತ 2ನೇ ವರ್ಷ ಸೆಮಿಫೈನಲ್‌ನಲ್ಲಿ ನಿರಾಸೆ ಎದುರಿಸಿತು. ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಆರಂಭಿಕರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಆರ್‌.ಸಮರ್ಥ್‌ರ ಸಾಧಾರಣ ಆಟದ ಹೊರತಾಗಿಯೂ ಚೇತರಿಕೆ ಕಂಡು 50 ಓವರಲ್ಲಿ 8 ವಿಕೆಟ್‌ಗೆ 282 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ಆರಂಭಿಕ ಆಘಾತಕ್ಕೆ ಗುರಿಯಾಯಿತು. 2ನೇ ಓವರಲ್ಲಿ 1 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಭಾರಿ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ದೀಪಕ್‌ ಹೂಡಾ ಆಸರೆಯಾದರು. ಮಹಿಪಾಲ್‌ ಲೊಮ್ರೊರ್‌ 14 ರನ್‌ ಗಳಿಸಿ ಔಟಾದಾಗ ತಂಡದ ಮೊತ್ತ 23 ರನ್‌. ಆನಂತರ ಹೂಡಾ ಹಾಗೂ ಕರಣ್‌ ಲಾಂಬಾ ಅವರನ್ನು ನಿಯಂತ್ರಿಸಲು ರಾಜ್ಯದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಕರ್ನಾಟಕದ ಕಳಪೆ ಫೀಲ್ಡಿಂಗ್‌ನ ಲಾಭವೆತ್ತಿದ ಹೂಡಾ ಹಾಗೂ ಕರಣ್‌, ರಾಜ್ಯದ ಸಾಧಾರಣ ಬೌಲಿಂಗ್‌ ದಾಳಿ ಎದುರು ಸುಲಭವಾಗಿ ರನ್‌ ಪೇರಿಸಿದರು. ವಾಸುಕಿ ಕೌಶಿಕ್‌ರ ಆರಂಭಿಕ ಸ್ಪೆಲ್‌ ಮುಗಿಯುತ್ತಿದ್ದಂತೆ ರಾಜಸ್ಥಾನ ಮೇಲುಗೈ ಸಾಧಿಸಲು ಆರಂಭಿಸಿತು. ಒಂದು ಬದಿಯಲ್ಲಿ ಕರಣ್‌ ಎಚ್ಚರಿಕೆಯಿಂದ ಆಡುತ್ತ, ಸ್ಟ್ರೈಕ್‌ ಬದಲಿಸಿ ಹೂಡಾ ಹೆಚ್ಚು ಎಸೆತಗಳನ್ನು ಎದುರಿಸುವಂತೆ ನೋಡಿಕೊಂಡರೆ, ರಾಜ್ಯದ ಬೌಲರ್‌ಗಳನ್ನು ಹೂಡಾ ಚೆಂಡಾಡಿದರು. ಆಕರ್ಷಕ ಫುಟ್‌ವರ್ಕ್‌ ಪ್ರದರ್ಶಿಸಿದ ಹೂಡಾ, 85 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕವೂ ಹೂಡಾ ಆರ್ಭಟ ನಿಲ್ಲಲಿಲ್ಲ. ಕೌಶಿಕ್‌ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳನ್ನು ದಂಡನೆಗೆ ಗುರಿಯಾಗಿಸಿದ ಹೂಡಾ, ಕೇವಲ 128 ಎಸೆತಗಳಲ್ಲಿ 19 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 180 ರನ್‌ ಗಳಿಸಿ, ಗೆಲುವಿಗೆ ಕೇವಲ 5 ರನ್‌ ಬೇಕಿದ್ದಾಗ ಔಟಾದರು. 4ನೇ ವಿಕೆಟ್‌ಗೆ ಕರಣ್‌ ಜೊತೆ ಹೂಡಾ 225 ಎಸೆತಗಳಲ್ಲಿ 255 ರನ್‌ ಸೇರಿಸಿ, ತಂಡದ ಗೆಲುವನ್ನು ಖಚಿತಪಡಿಸಿದರು. ಕರಣ್‌ 112 ಎಸೆತಗಳಲ್ಲಿ 73 ರನ್‌ ಗಳಿಸಿ ಔಟಾಗದೆ ಉಳಿದರು. ಅಭಿ-ಮನೋಜ್‌ ಆಸರೆ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಸಮರ್ಥ್‌ (08), ಮಯಾಂಕ್‌ (13) ರನ್‌ ಗಳಿಸಿ ಔಟಾದರು. ನಿಕಿನ್‌ (21), ಶ್ರೀಜಿತ್‌ (37) ಕೆಲ ಕಾಲ ಕ್ರೀಸ್‌ನಲ್ಲಿ ನಿಂತರೂ ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲರಾದರು. 87 ರನ್‌ಗೆ ಕರ್ನಾಟಕ 4 ವಿಕೆಟ್‌ ಕಳೆದುಕೊಂಡಿತು.ಮನೀಶ್‌ ಪಾಂಡೆ 28 ರನ್‌ ಗಳಿಸಲು 48 ಎಸೆತ ವ್ಯರ್ಥ ಮಾಡಿದರು. ಅಭಿನವ್‌ ಮನೋಹರ್‌ ದೊಡ್ಡ ಹೊಡೆತಗಳ ಮೂಲಕ ಕರ್ನಾಟಕ ರನ್‌ರೇಟ್‌ನಲ್ಲಿ ಬಹಳ ಹಿಂದೆ ಬೀಳದಂತೆ ನೋಡಿಕೊಂಡರು. ಬಳಿಕ 6ನೇ ವಿಕೆಟ್‌ಗೆ ಮನೋಜ್‌ ಜೊತೆ ಸೇರಿ ಕೇವಲ 68 ಎಸೆತದಲ್ಲಿ 95 ರನ್‌ ಚಚ್ಚಿ, ತಂಡ ಸ್ಪರ್ಧಾತ್ಮಕ ಗುರಿ ತಲುಪಲು ಕಾರಣರಾದರು. ಅಭಿನವ್‌ 80 ಎಸೆತದಲ್ಲಿ 91 ರನ್‌ ಗಳಿಸಿದರೆ, ಮನೋಜ್‌ 39 ಎಸೆತದಲ್ಲಿ 63 ರನ್‌ ಸಿಡಿಸಿದರು. ಸ್ಕೋರ್‌: ಕರ್ನಾಟಕ 50 ಓವರಲ್ಲಿ 282/8 (ಅಭಿನವ್‌ 91, ಮನೋಜ್‌ 63, ಅನಿಕೇತ್‌ 2-43), ರಾಜಸ್ಥಾನ 43.4 ಓವರಲ್ಲಿ 283/4 (ಹೂಡಾ 180, ಕರಣ್‌ 73*, ಕೌಶಿಕ್‌ 1-28)==4 ವರ್ಷದಲ್ಲಿ 3ನೇಸಲ ಸೆಮಿ ಸೋಲು!2019ರಲ್ಲಿ ಕೊನೆಯ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕ ಆ ಬಳಿಕ 3 ಬಾರಿ ಸೆಮೀಸ್‌ನಲ್ಲಿ ಎಡವಿದೆ. 2020, 2022ರಲ್ಲೂ ಅಂತಿಮ-4ರ ಘಟ್ಟದಲ್ಲೇ ರಾಜ್ಯಕ್ಕೆ ಸೋಲು ಎದುರಾಗಿತ್ತು. 2021ರಲ್ಲಿ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು.