ಸಾರಾಂಶ
ಯುವ ಸ್ಟ್ರೈಕರ್ ದೀಪಿಕಾ 5 ಗೋಲು ಬಾರಿಸಿದ ಪರಿಣಾಮ, ಹಾಲಿ ಚಾಂಪಿಯನ್ ಭಾರತ ತಂಡ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 13-0 ಗೋಲುಗಳ ಗೆಲುವು ಸಾಧಿಸಿತು. ಆ ಮೂಲಕ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು
ರಾಜ್ಗಿರ್(ಬಿಹಾರ): ಯುವ ಸ್ಟ್ರೈಕರ್ ದೀಪಿಕಾ 5 ಗೋಲು ಬಾರಿಸಿದ ಪರಿಣಾಮ, ಹಾಲಿ ಚಾಂಪಿಯನ್ ಭಾರತ ತಂಡ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 13-0 ಗೋಲುಗಳ ಗೆಲುವು ಸಾಧಿಸಿತು. ಆ ಮೂಲಕ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು.
ಪಂದ್ಯದಲ್ಲಿ ಭಾರತೀಯರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ತನ್ನಿಚ್ಛೆಯಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ, ಎದುರಾಳಿಗೆ ಒಮ್ಮೆಯೂ ಗೋಲು ಪೆಟ್ಟಿಗೆಯತ್ತ ಚೆಂಡನ್ನು ಕೊಂಡೊಯ್ಯಲು ಅವಕಾಶವನ್ನೇ ನೀಡಲಿಲ್ಲ.
3ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ದೀಪಿಕಾ ಆ ಬಳಿಕ 19, 43, 45, 45 ನಿಮಿಷಗಳಲ್ಲಿ ಗೋಲು ಬಾರಿಸಿದರು. ಪ್ರೀತಿ ದುಬೆ (9ನೇ ನಿ., 40ನೇ ನಿ.), ಲಾಲ್ರೆಮ್ಸಿಯಾಮಿ (12ನೇ ನಿ., 56ನೇ ನಿ.), ಮನೀಶಾ ಚೌಹಾಣ್ (55ನೇ ನಿ., 58ನೇ ನಿ.) ತಲಾ 2 ಗೋಲು ಬಾರಿಸಿದರು. ಬ್ಯುಟಿ ಡುಂಗ್ ಡುಂಗ್ (30ನೇ ನಿ.) ಹಾಗೂ ನವ್‌ನೀತ್ ಕೌರ್ (53ನೇ ನಿ.) ತಲಾ 1 ಗೋಲು ದಾಖಲಿಸಿದರು.
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತ ಚೀನಾ ತಂಡವನ್ನು ಎದುರಿಸಲಿದೆ.