ಸಾರಾಂಶ
ಹೈದರಾಬಾದ್: ಭಾರತದ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಫಾರೊಕ್ ಇಂಜಿನಿಯರ್ ಬಿಸಿಸಿಐ ಜೀವಮಾನ ಸಾಧನೆ, ಯುವ ಬ್ಯಾಟರ್ ಶುಭ್‌ಮನ್ ಗಿಲ್ ವರ್ಷದ(2022-23) ಶ್ರೇಷ್ಠ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮಂಗಳವಾರ ಹೈದರಾಬಾದ್‌ನಲ್ಲಿ ಬಿಸಿಸಿಐ ಆಯೋಜಿಸಿದ್ದ ಸಮಾರಂಭದಲ್ಲಿ ಹಲವು ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಯಿತು. ವೇಗದ ಬೌಲರ್ ಮೊಹಮದ್ ಶಮಿ (2019-20), ಪ್ರಮುಖ ಆಲ್ರೌಂಡರ್ ಆರ್.ಅಶ್ವಿನ್ (2020-21), ವೇಗಿ ಜಸ್‌ಪ್ರೀತ್ ಬೂಮ್ರಾ(2021-22) ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರ ಪ್ರಶಸ್ತಿಗೆ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ಆಲ್ರೌಂಡರ್ ದೀಪ್ತಿ ಶರ್ಮಾ(2019-20 ಮತ್ತು 2022-23), ತಾರಾ ಬ್ಯಾಟರ್ ಸ್ಮೃತಿ ಮಂಧನಾ(2020-21 ಮತ್ತು 2021-22) ಪ್ರಶಸ್ತಿ ಪಡೆದುಕೊಂಡರು.
ಸಮಾರಂಭದಲ್ಲಿ ಭಾರತ ತಂಡದ ಹಾಲಿ, ಮಾಜಿ ಆಟಗಾರರು, ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡಾನ್ ಮೆಕಲಮ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಮಯಾಂಕ್‌ಗೆ ಪ್ರಶಸ್ತಿ: ಪಾದಾರ್ಪಣಾ ವರ್ಷದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ನೀಡುವ ಪ್ರಶಸ್ತಿಯನ್ನು ಕರ್ನಾಟಕದ ಮಯಾಂಕ್ ಅಗರ್‌ವಾಲ್(2019-20), ಆಲ್ರೌಂಡರ್ ಅಕ್ಷರ್ ಪಟೇಲ್(2020-21), ತಾರಾ ಬ್ಯಾಟರ್ ಶ್ರೇಯಸ್ ಅಯ್ಯರ್(2021-22), ಯುವ ತಾರೆ ಯಶಸ್ವಿ ಜೈಸ್ವಾಲ್(2022-23) ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಪ್ರಿಯಾ ಪೂನಿಯಾ(2019-20), ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ(2020-21), ಎಸ್.ಮೇಘನಾ(2021-22), ಅಮನ್‌ಜೋತ್ ಕೌರ್(2022-23)ಗೆ ನೀಡಲಾಯಿತು.