ಗುಜರಾತ್‌ ಬೆಂಬಿಡದ ಸೋಲು: ಸತತ 4ನೇ ಪಂದ್ಯದಲ್ಲೂ ಗೆಲುವು ಮರೀಚಿಕೆ!

| Published : Mar 04 2024, 01:16 AM IST / Updated: Mar 04 2024, 10:26 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ಗೆ 25 ರನ್‌ ಸೋಲು ಎದುರಾಯಿತು. ಕಳೆದ ಬಾರಿ ರನ್ನರ್‌-ಅಪ್‌ ಡೆಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಬೆಂಗಳೂರು: 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಗುಜರಾತ್‌ ಜೈಂಟ್ಸ್‌ ಸತತ 4ನೇ ಪಂದ್ಯದಲ್ಲೂ ಸೋಲನುಭವಿಸಿದೆ. 

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ಗೆ 25 ರನ್‌ ಸೋಲು ಎದುರಾಯಿತು. ಕಳೆದ ಬಾರಿ ರನ್ನರ್‌-ಅಪ್‌ ಡೆಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ, ನಾಯಕಿ ಮೆಗ್‌ ಲ್ಯಾನಿಂಗ್‌ರ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 163 ರನ್‌ ಕಲೆಹಾಕಿತು. ಲ್ಯಾನಿಂಗ್‌ 41 ಎಸೆತಗಳಲ್ಲಿ 55 ರನ್‌ ಸಿಡಿಸಿದರು. 

ಅಲೈಸ್‌ ಕ್ಯಾಪ್ಸಿ 29, ಸುಥರ್‌ಲೆಂಡ್‌ 20 ರನ್‌ ಕೊಡುಗೆ ನೀಡಿದರು. ಗುಜರಾತ್‌ನ ಮೇಘನಾ ಸಿಂಗ್‌ 37 ರನ್ ನೀಡಿ 4 ವಿಕೆಟ್‌ ಪಡೆದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್‌ ಮತ್ತೆ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು.

 73ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಆ್ಯಶ್ಲೆ ಗಾರ್ಡ್ನರ್‌(31 ಎಸೆತದಲ್ಲಿ 40) ನೆರವಾದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ತಂಡ 20 ಓವರಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಜೆಸ್ ಜೊನಾಸೆನ್‌ 3 ವಿಕೆಟ್‌ ಕಬಳಿಸಿದರು.

ಬೆಂಗ್ಳೂರು ಚರಣ ಇಂದು ಕೊನೆ: ಈ ಬಾರಿ ಡಬ್ಲ್ಯುಪಿಎಲ್‌ 2 ನಗರಗಳಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ಮೊದಲ ಚರಣದ ಪಂದ್ಯಗಳು ಸೋಮವಾರ ಕೊನೆಗೊಳ್ಳಲಿದೆ. 

ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್‌ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಕೊನೆ ಪಂದ್ಯ ನಡೆಯಲಿದೆ. ಮಂಗಳವಾರದಿಂದ ಡೆಲ್ಲಿಯಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಫೈನಲ್‌ ಕೂಡಾ ಅಲ್ಲೇ ನಡೆಯಲಿದೆ.