ಡೆಲ್ಲಿ ಫೈನಲ್‌ಗೆ ಲಗ್ಗೆ: ಎಲಿಮಿನೇಟರ್‌ನಲ್ಲಿ ಸೆಣಸಲಿವೆ ಆರ್‌ಸಿಬಿ vs ಮುಂಬೈ

| Published : Mar 14 2024, 02:00 AM IST

ಸಾರಾಂಶ

ಅಭೂತಪೂರ್ವ ಪ್ರದರ್ಶನ ತೋರಿ ಅಗ್ರಸ್ಥಾನಿಯಾದ ಡೆಲ್ಲಿ ನೇರವಾಗಿ ಫೈನಲ್‌ಗೇರಿದರೆ, ಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾದ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಶುಕ್ರವಾರ ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ.

ನವದೆಹಲಿ: ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಕಳೆದ ಬಾರಿ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಆವೃತ್ತಿ ಡಬ್ಲ್ಯುಪಿಎಲ್‌ನಲ್ಲಿ ನೇರವಾಗಿ ಫೈನಲ್‌ ಪ್ರವೇಶಿಸಿದೆ.ಡೆಲ್ಲಿ 8ರಲ್ಲಿ 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. 2ನೇ ಸ್ಥಾನಿಯಾದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ 3ನೇ ಸ್ಥಾನ ಪಡೆದ ಆರ್‌ಸಿಬಿ ಶುಕ್ರವಾರ ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ. ಗುಜರಾತ್‌ 8 ಪಂದ್ಯಗಳಲ್ಲಿ ಕೇವಲ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿಯೇ ಅಭಿಯಾನ ಕೊನೆಗೊಳಿಸಿತು.ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 20 ಓವರಲ್ಲಿ 9 ವಿಕೆಟ್‌ಗೆ ಕೇವಲ 126 ರನ್‌ ಕಲೆಹಾಕಿತು. ಭಾರತಿ ಫುಲ್ಮಾಲಿ 42, ಕ್ಯಾಥರಿನ್‌ ಬ್ರೇಸ್‌ 28 ರನ್‌ ಗಳಿಸಿದರು. ಸುಲಭ ಗುರಿ ಪಡೆದ ಡೆಲ್ಲಿ 13.1 ಓವರಲ್ಲೇ ಗೆದ್ದು ಫೈನಲ್‌ಗೇರಿತು. ಶಫಾಲಿ ವರ್ಮಾ ಕೇವಲ 37 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್‌ನೊಂದಿಗೆ 71 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೆಮಿಮಾ ರೋಡ್ರಿಗ್ಸ್‌ ಔಟಾಗದೆ 38 ರನ್‌ ಕೊಡುಗೆ ನೀಡಿದರು.ಎಲಿಮಿನೇಟರ್‌ ಪಂದ್ಯ ನಾಳೆ

ಲೀಗ್‌ ಹಂತದಲ್ಲಿ ಅಭೂತಪೂರ್ವ ಪ್ರದರ್ಶನ ತೋರಿ ಅಗ್ರಸ್ಥಾನಿಯಾದ ಡೆಲ್ಲಿ ನೇರವಾಗಿ ಫೈನಲ್‌ಗೇರಿದರೆ, ಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾದ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಶುಕ್ರವಾರ ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಮಾ.17ರಂದು ಡೆಲ್ಲಿ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿವೆ.