ಭಾರತೀಯ ಕುಸ್ತಿ ಫೆಡರೇಷನ್‌ vs ತಾರಾ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರು!

| Published : Aug 17 2024, 12:48 AM IST / Updated: Aug 17 2024, 04:21 AM IST

ಸಾರಾಂಶ

ಭಾರತೀಯ ಕುಸ್ತಿ ಫೆಡರೇಷನ್‌  ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರುವಾಗಿದೆ. ಈ ಹಿಂದೆ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಕುಸ್ತಿ ಫೆಡರೇಷನ್‌ನ ಅಧಿಕಾರ ನೋಡಿಕೊಳ್ಳಲು ನೇಮಿಸಿದ್ದ ತಾತ್ಕಾಲಿಕ ಆಡಳಿತ ಸಮಿತಿಗೆ   ದೆಹಲಿ ಹೈಕೋರ್ಟ್‌ ಅಧಿಕಾರ ಹಸ್ತಾಂತರಿಸಿದೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರುವಾಗಿದೆ. ಈ ಹಿಂದೆ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಕುಸ್ತಿ ಫೆಡರೇಷನ್‌ನ ಅಧಿಕಾರ ನೋಡಿಕೊಳ್ಳಲು ನೇಮಿಸಿದ್ದ ತಾತ್ಕಾಲಿಕ ಆಡಳಿತ ಸಮಿತಿಗೆ ಶುಕ್ರವಾರ ದೆಹಲಿ ಹೈಕೋರ್ಟ್‌ ಮತ್ತೊಮ್ಮೆ ಅಧಿಕಾರ ಹಸ್ತಾಂತರಿಸಿದೆ. 

ಈ ಮೂಲಕ ಕುಸ್ತಿ ಸಂಸ್ಥೆಯ ವಿಚಾರದಲ್ಲಿ ನಡೆಯುತ್ತಿರುವ ಸಂಘರ್ಷ ಬೇಗನೇ ಶಮನಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಕುಸ್ತಿ ಫೆಡರೇಷನ್‌ನ ಕಾರ್ಯಚಟುವಟಿಕೆಗಳನ್ನು ತಡೆಹಿಡಿಯುವಂತೆ ಭಜರಂಗ್ ಪೂನಿಯಾ, ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಸೇರಿದಂತೆ ಕೆಲ ತಾರಾ ಕುಸ್ತಿಪಟುಗಳು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಇದರ ವಿಚಾರಣೆ ನಡೆಸಿದ ನ್ಯಾ.ಸಚಿನ್‌ ದತ್ತಾ, ಕುಸ್ತಿ ಸಂಸ್ಥೆಯ ಮೇಲಿನ ಅಧಿಕಾರವನ್ನು ತಾತ್ಕಾಲಿಕ ಆಡಳಿತ ಸಮಿತಿಗೆ ನೀಡಲು ಭಾರತೀಯ ಒಲಿಂಪಿಕ್‌ ಸಂಸ್ಥೆಗೆ ಆದೇಶಿಸಿದ್ದಾರೆ.ಆದರೆ ಫೆಡರೇಷನ್‌ಗೆ ನಿವೃತ್ತ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲು ತಾವು ಒಲವು ಹೊಂದಿಲ್ಲ ಎಂದು ದತ್ತಾ ತಿಳಿಸಿದ್ದಾರೆ.

ಏನಿದು ಪ್ರಕರಣ?: ಕಳೆದ ವರ್ಷ ಜನವರಿಯಲ್ಲಿ ಡಬ್ಲ್ಯುಎಫ್‌ಐನ ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಸೇರಿ ಹಲವು ಗಂಭೀರ ಆರೋಪಗಳನ್ನು ಹೊರಿಸಿ ಭಜರಂಗ್‌, ವಿನೇಶ್‌, ಸಾಕ್ಷಿ ಮಲಿಕ್‌ ಸೇರಿ ಪ್ರಮುಖರು ಪ್ರತಿಭಟನೆ ಆರಂಭಿಸಿದ್ದರು. ಬಳಿಕ ಏಪ್ರಿಲ್‌ನಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್ಐಅನ್ನು ಅಮಾನತುಗೊಳಿಸಿ, ಸಂಸ್ಥೆಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿಯನ್ನು ರಚಿಸಲಾಗಿತ್ತು.

 ಭಾರಿ ಸಂಘರ್ಷದ ನಡುವೆ 2023ರ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಗೆ ಚುನಾವಣೆ ನಡೆದು, ಬ್ರಿಜ್‌ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ನೇತೃತ್ವದ ನೂತನ ಸಮಿತಿ ಅಧಿಕಾರಕ್ಕೆ ಬಂದಿತ್ತು. ಆದರೆ ಕ್ರೀಡಾ ನಿಯಮ ಪಾಲಿಸದ ಕಾರಣಕ್ಕೆ ಸಮಿತಿಯನ್ನು ಕ್ರೀಡಾ ಸಚಿವಾಲಯ ಮತ್ತೆ ಅಮಾನತುಗೊಳಿಸಿತ್ತು. ಅಲ್ಲದೆ, ಸ್ವತಂತ್ರ ಸಮಿತಿಯನ್ನು ರಚಿಸಿ ಅಧಿಕಾರ ಹಸ್ತಾಂತರಿಸುವಂತೆ ಒಲಿಂಪಿಕ್‌ ಸಂಸ್ಥೆಗೆ ಸೂಚಿಸಿತ್ತು. ಆದರೆ 2024ರ ಮಾರ್ಚ್‌ನಲ್ಲಿ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದ ಒಲಿಂಪಿಕ್‌ ಸಂಸ್ಥೆ, ಸಂಜಯ್‌ ನೇತೃತ್ವದ ಸಮಿತಿಗೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿದ್ದ ಕುಸ್ತಿಪಟುಗಳು, ಸಂಜಯ್‌ ಸಿಂಗ್‌ ಸಮಿತಿಯನ್ನು ಅನರ್ಹಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಶ್ವ ಕುಸ್ತಿ, ಐಒಸಿ ನೆರವು ಕೇಳುತ್ತೇವೆ: ಡಬ್ಲ್ಯುಎಫ್‌ಐ

ಡಬ್ಲ್ಯುಎಫ್‌ಐನ ಅಧಿಕಾರ ಮೊಟಕುಗೊಳಿಸಿರುವುದನ್ನು ಒಕ್ಕೂಟದ ಅಧ್ಯಕ್ಷ ಸಂಜಯ್‌ ಸಿಂಗ್‌ ಖಂಡಿಸಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಕುಸ್ತಿ ಫೆಡರೇಷನ್‌(ಯುಡಬ್ಲ್ಯುಡಬ್ಲ್ಯು) ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ(ಐಒಸಿ) ನೆರವನ್ನೂ ಕೇಳುತ್ತೇವೆ ಎಂದಿದ್ದಾರೆ. ‘ನಾವು ಇದರ ವಿರುದ್ಧ ಜಂಟಿ ಸಮಿತಿಗೆ ಮೇಲ್ಮನವಿ ಸಲ್ಲಿಸುತ್ತೇವೆ. ಜಾಗತಿಕ ಕುಸ್ತಿ, ಐಒಸಿಗೂ ಮನವಿ ಮಾಡುತ್ತೇವೆ. ಹೊರಗಿನ ಹಸ್ತಕ್ಷೇಪ ಕ್ರೀಡಾಪಟುಗಳ ಮೇಲೆ ಪರಿಣಾಮ ಬೀರಬಹುದು ಎಂದು ಯುಡಬ್ಲ್ಯುಡಬ್ಲ್ಯು, ಐಒಸಿ ಮೊದಲೇ ಎಚ್ಚರಿಕೆ ನೀಡಿತ್ತು. ಈಗ 2 ವಿಶ್ವ ಚಾಂಪಿಯನ್‌ಶಿಪ್‌ ಶುರುವಾಗಲಿದೆ. ಆದರೆ ಹೈಕೋರ್ಟ್‌ ಆದೇಶದಿಂದಾಗಿ ನಮ್ಮ ಕುಸ್ತಿಪಟುಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಭಾರತೀಯರ ಸ್ಪರ್ಧೆ ಮೇಲೆ ಪರಿಣಾಮ ಬೀರುವ ಆತಂಕ

ಡಬ್ಲ್ಯುಎಫ್‌ಐ ಮೇಲಿನ ನಿಯಂತ್ರವಣವನ್ನು ಸ್ವತಂತ್ರ ಸಮಿತಿಗೆ ನೀಡಿರುವುದರಿಂದ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಸ್ಪರ್ಧೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಆ.19ರಿಂದ 25ರ ವರೆಗೆ ಜೊರ್ಡನ್‌ನಲ್ಲಿ ಅಂಡರ್‌-17 ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಸೆ.2ರಿಂದ 8ರ ವರೆಗೆ ಸ್ಪೇನ್‌ನಲ್ಲಿ ಅಂಡರ್‌-20 ವಿಶ್ವ ಚಾಂಪಿಯನ್‌ಶಿಪ್‌ ನಿಗದಿಯಾಗಿದೆ.ಆದರೆ ಡಬ್ಲ್ಯುಎಫ್‌ಐ ಮೇಲೆ ಸ್ವತಂತ್ರ ಸಮಿತಿ ನಿಯಂತ್ರಣ ಸಾಧಿಸಿದರೆ, ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಜಾಗತಿಕ ಕುಸ್ತಿ ಸಂಸ್ಥೆ ಈ ಮೊದಲೇ ಸ್ಪಷ್ಟವಾಗಿ ಹೇಳಿತ್ತು. ಹೀಗಾಗಿ, ಹೊಸದಾಗಿ ನೇಮಕಗೊಂಡಿರುವ ಸ್ವತಂತ್ರ ಸಮಿತಿಯು ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ಕುಸ್ತಿಪಟುಗಳನ್ನು ಆಯ್ಕೆ ಮಾಡಿದರೂ, ಅದನ್ನು ಜಾಗತಿಕ ಕುಸ್ತಿ ಸಂಸ್ಥೆ ತಡೆಹಿಡಿಯುವ ಸಾಧ್ಯತೆಯಿದೆ.