ಸಾರಾಂಶ
ಮುಲ್ಲಾನ್‌ಪುರ: ಭುಜದ ಗಾಯಕ್ಕೆ ತುತ್ತಾಗಿರುವ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 7ರಿಂದ 10 ದಿನಗಳ ಕಾಲ ಹೊರಗುಳಿಯಲಿದ್ದಾರೆ ಎಂದು ತಂಡದ ಮುಖ್ಯಸ್ಥ ಸಂಜಯ್ ಬಾಂಗರ್ ತಿಳಿಸಿದ್ದಾರೆ. ಧವನ್ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಅವರು ಸಂಪೂರ್ಣ ಚೇತರಿಸಲು 10 ದಿನಗಳು ಬೇಕಾಗಬಹುದು. ಹೀಗಾಗಿ ಮುಂಬೈ(ಏ.18) ಹಾಗೂ ಗುಜರಾತ್(ಏ.21) ವಿರುದ್ಧದ ಪಂದ್ಯಕ್ಕೆ ಗೈರಾಗುವ ಸಾಧ್ಯತೆಯಿದೆ ಎಂದು ಸಂಜಯ್ ಮಾಹಿತಿ ನೀಡಿದ್ದಾರೆ.ಇದು ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಲಿದೆ. ಶಿಖರ್ ಧವನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ತಂಡದಿಂದ ಹೊರಗುಳಿದ್ದರು. ಧವನ್ ಅವರ ಅನುಪಸ್ಥಿತಿಯಲ್ಲಿ ಪಂಜಾಬ್ ತಂಡವನ್ನು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಮುನ್ನಡೆಸಿದ್ದರು. ಇದೀಗ ಮುಂದಿನ ಕೆಲವು ಪಂದ್ಯಗಳಿಗೂ ಆರಂಭಿಕ ಆಟಗಾರ ಅಲಭ್ಯರಾಗುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿಯೇ ಉಳಿದಿದೆ.
ಏಷ್ಯನ್ ಕುಸ್ತಿ: ಭಾರತದ ಅಂಜು, ಹರ್ಷಿತಾಗೆ ಬೆಳ್ಳಿ
ಬಿಶ್ಕೆಕ್(ಕಿರ್ಗಿಸ್ತಾನ): ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆ 2 ಪದಕ ತನ್ನದಾಗಿಸಿಕೊಂಡಿದೆ. ಭಾನುವಾರ ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಂಜು, ಕೊರಿಯಾದ ಜಿ ಹ್ಯಾಂಗ್ ಕಿಮ್ ವಿರುದ್ಧ 0-10 ಅಂತರದಲ್ಲಿ ಸೋಲನುಭವಿಸಿದರು. ಆಯ್ಕೆ ಟ್ರಯಲ್ಸ್‌ನಲ್ಲಿ ವಿನೇಶ್ ಫೋಗಟ್‌ರನ್ನು ಸೋಲಿಸಿದ್ದ ಅಂಜು ಚಿನ್ನ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು. ಆದರೆ ಫೈನಲ್‌ನಲ್ಲಿ ನಿರೀಕ್ಷೆ ಪ್ರದರ್ಶನ ನೀಡಲಾಗಲಿಲ್ಲ. ಇದೇ ವೇಳೆ ಹರ್ಷಿತಾ ಅವರು ಚೀನಾದ ಕ್ವಿಯಾನ್ ಜಿಯಾಂಗ್ ವಿರುದ್ಧ 2-5ರಲ್ಲಿ ಪರಾಭವಗೊಂಡರು.