ಸಾರಾಂಶ
ಗುವಾಹಟಿ: ಎಂ.ಎಸ್.ಧೋನಿ ಐಪಿಎಲ್‌ನಲ್ಲಿ ಮುಂದುವರಿಯುವ ಬದಲು ನಿವೃತ್ತಿಯಾಗಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಧಾನ ಕೋಚ್ ಸ್ಟೀಫನ್ ಫ್ಲೆಮಿಂಗ್‌ರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಫ್ಲೆಮಿಂಗ್, ‘ನಿವೃತ್ತಿಯ ಸಮಯ ಹತ್ತಿರಬಂದಿದೆ ಎಂಬುದು ಧೋನಿಗೂ ಗೊತ್ತಿದೆ. ಮೊದಲಿನಂತೆ ಅವರು ಮೈದಾನದಲ್ಲಿ ಓಡಾಡಲು ಆಗುತ್ತಿಲ್ಲ. ನಿರಂತರವಾಗಿ ಓಡುತ್ತ, 10 ಓವರ್ ಬ್ಯಾಟ್ ಮಾಡಲು ಅವರಿಗೆ ಸಾಧ್ಯವಿಲ್ಲ. ಯಾವ ದಿನದಂದು ತಂಡಕ್ಕೆ ಎಷ್ಟು ಕೊಡುಗೆ ನೀಡಬಹುದು ಎನ್ನುವುದನ್ನು ಧೋನಿಯೇ ನಿರ್ಧರಿಸುತ್ತಾರೆ’ ಎಂದರು.
ಫ್ಲೆಮಿಂಗ್‌ರ ಈ ಹೇಳಿಕೆ ಬಗ್ಗೆ ಸಾಮಾಜಿಕ ತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಧೋನಿ ಕೂಡಲೇ ನಿವೃತ್ತಿ ಘೋಷಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟರೆ, ಅವರು ವಿಕೆಟ್ ಕೀಪಿಂಗ್, ತಂಡ ನಿರ್ವಹಣೆಯಲ್ಲಿ ಕೊಡುಗೆ ನೀಡುತ್ತಿದ್ದು, ಇನ್ನಷ್ಟು ದಿನ ಮುಂದುವರಿಯಲು ಸಮಸ್ಯೆ ಇಲ್ಲ ಎಂದು ಮತ್ತೆ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.