ಋತುರಾಜ್‌ಗೆ ಚೆನ್ನೈ ನಾಯಕತ್ವ ಹಸ್ತಾಂತರಿಸಿದ ಎಂ.ಎಸ್‌.ಧೋನಿ!

| Published : Mar 22 2024, 01:07 AM IST

ಋತುರಾಜ್‌ಗೆ ಚೆನ್ನೈ ನಾಯಕತ್ವ ಹಸ್ತಾಂತರಿಸಿದ ಎಂ.ಎಸ್‌.ಧೋನಿ!
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿರುವ ಋತುರಾಜ್‌ ಗಾಯಕ್ವಾಡ್‌. ಐಪಿಎಲ್‌ ಆರಂಭದಿಂದಲೂ ಚೆನ್ನೈ ತಂಡದ ನಾಯಕರಾಗಿದ್ದ ಎಂ.ಎಸ್‌.ಧೋನಿ. ಈ ಬಾರಿ ಕೇವಲ ಆಟಗಾರನಾಗಿ ಆಡಲಿರುವ ಧೋನಿ.

ಚೆನ್ನೈ: ದಿಗ್ಗಜ ಎಂ.ಎಸ್‌.ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವನ್ನು ಯುವ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. 17ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇದ್ದಾಗ ಧೋನಿ ಈ ನಿರ್ಧಾರ ಕೈಗೊಂಡಿದ್ದು, ಕ್ರಿಕೆಟ್‌ ವಲಯದಲ್ಲಿ ಭಾರಿ ಅಚ್ಚರಿ ಮೂಡಿಸಿದೆ.ಐಪಿಎಲ್‌ನ ಅಧಿಕೃತ ‘ಎಕ್ಸ್‌’ (ಟ್ವೀಟರ್‌) ಖಾತೆಯಲ್ಲಿ ಗುರುವಾರ ಮಧ್ಯಾಹ್ನ, ನಾಯಕತ್ವ ಬದಲಾವಣೆಯ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. 2020ರಿಂದ ಚೆನ್ನೈ ತಂಡದಲ್ಲಿರುವ ಋತುರಾಜ್‌, ಈ ವರೆಗೂ 52 ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ.ಧೋನಿ ಈ ಆವೃತ್ತಿಯ ಬಳಿಕ ಐಪಿಎಲ್‌ನಿಂದ ನಿವೃತ್ತಿಯಾಗಬಹುದು ಎನ್ನುವ ಗುಸು ಗುಸು ಇದ್ದು, ಇದೇ ಕಾರಣದಿಂದ ತಂಡದ ನಾಯಕತ್ವವನ್ನು ಯುವ ಆಟಗಾರನಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗಾಯಕ್ವಾಡ್‌ ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಅಲ್ಲದೇ ಮಹಾರಾಷ್ಟ್ರ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ಈ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಅವರ ಹೆಗಲ ಮೇಲಿದೆ.2022ರಲ್ಲೂ ನಾಯಕತ್ವ ಬಿಟ್ಟು, ಮರಳಿ ಪಡೆದಿದ್ದರು!15ನೇ ಆವೃತ್ತಿಗೂ ಮುನ್ನ ಧೋನಿ ತಾವು ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದರು. ಚೆನ್ನೈ ಮಾಲಿಕರು ರವೀಂದ್ರ ಜಡೇಜಾಗೆ ನಾಯಕತ್ವದ ಹೊಣೆ ಹೊರೆಸಿದ್ದರು. ಆದರೆ ಜಡೇಜಾ ನಾಯಕತ್ವದ ಒತ್ತಡ ತಾಳಲಾರದೆ ಟೂರ್ನಿ ಮಧ್ಯೆದಲ್ಲೇ ನಾಯಕತ್ವ ಬಿಟ್ಟಿದ್ದರು. ಆಗ ಮತ್ತೆ ಧೋನಿಯೇ ಚೆನ್ನೈನ ನಾಯಕತ್ವ ವಹಿಸಿಕೊಳ್ಳಬೇಕಾಗಿತ್ತು.ಧೋನಿ ನಿರ್ಧಾರ ಕೇಳಿ ಸಿಎಸ್‌ಕೆ ಮಾಲಿಕರಿಗೆ ಅಚ್ಚರಿ!ಯಾವುದೇ ಸದ್ದು ಗದ್ದಲಗಳಿಲ್ಲದೆ ತಮ್ಮ ನಿರ್ಧಾರಗಳನ್ನು ದಿಢೀರನೆ ಪ್ರಕಟಿಸುವುದು ಧೋನಿಯ ವಿಶೇಷತೆ. ನಾಯಕತ್ವ ಹಸ್ತಾಂತರದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್‌, ‘ಗುರುವಾರ ನಾಯಕರ ಫೋಟೋಶೂಟ್‌ಗೆ ಕೆಲವೇ ಗಂಟೆ ಬಾಕಿ ಇರುವಾಗ ಧೋನಿ ತಮ್ಮ ನಿರ್ಧಾರವನ್ನು ನಮಗೆ ತಿಳಿಸಿದರು. ಸಿಎಸ್‌ಕೆ ಆಡಳಿತ ಧೋನಿಯ ನಿರ್ಧಾರವನ್ನು ಗೌರವಿಸುತ್ತದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಋತುರಾಜ್‌ ಸಮರ್ಥರು’ ಎಂದಿದ್ದಾರೆ.