ಸಾರಾಂಶ
ಮೆಲ್ಬರ್ನ್: 2022ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ವೇಳೆ ತಮ್ಮ ಆಹಾರಕ್ಕೆ ವಿಷ ಬೆರೆಸಲಾಗಿತ್ತು ಎಂದು ದಾಖಲೆಯ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಗಂಭೀರ ಆರೋಪ ಮಾಡಿದ್ದಾರೆ.
2022ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ಸರ್ಬಿಯಾದ ಜೋಕೋ ಮೆಲ್ಬರ್ನ್‌ಗೆ ಆಗಮಿಸಿದ್ದರು. ಆದರೆ ಕೋವಿಡ್ ಲಸಿಕೆ ಹಾಕಲು ನಿರಾಕರಿಸಿದ್ದಕ್ಕೆ ಜೋಕೋಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಬದಲಾಗಿ ಅವರನ್ನು ಮೆಲ್ಬರ್ನ್‌ನಲ್ಲೇ ದಿಗ್ಬಂಧನದಲ್ಲಿರಿಸಿ, ಬಳಿಕ ಗಡೀಪಾರು ಮಾಡಲಾಗಿತ್ತು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ವಿಶ್ವ ನಂ.1 ಜೋಕೋ, ‘ಮೆಲ್ಬರ್ನ್‌ನ ಹೋಟೆಲ್‌ನಲ್ಲಿದ್ದಾಗ ನನ್ನ ಆಹಾರಕ್ಕೆ ಸೀಸ ಹಾಗೂ ಪಾದರಸ ಬೆರೆಸಲಾಗಿತ್ತು. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ಸರ್ಬಿಯಾಗೆ ಮರಳಿದ ಬಳಿಕ ಪರೀಕ್ಷೆ ಮಾಡಿಸಿದಾಗ ನನ್ನ ದೇಹದಲ್ಲಿ ಭಾರಿ ಪ್ರಮಾಣದ ಲೋಹ ಪತ್ತೆಯಾಗಿತ್ತು. ಆಹಾರದಲ್ಲೇ ಸೀಸ, ಪಾದರಸ ಬೆರೆಸಿದ್ದು ಆಗ ಗೊತ್ತಾಯಿತು.
ಆದರೆ ಈ ಬಗ್ಗೆ ನಾನು ಯಾವತ್ತೂ ಸಾರ್ವಜನಿಕವಾಗಿ ಮಾತನಾಡಿಲ್ಲ’ ಎಂದು ಆರೋಪಿಸಿದ್ದಾರೆ. 2022ರಲ್ಲಿ ಗಡೀಪಾರಾಗಿದ್ದ ಜೋಕೋ, 2023ರಲ್ಲಿ ಕಮ್‌ಬ್ಯಾಕ್ ಮಾಡಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಸೋತಿದ್ದರು. ಅವರು ಈ ವರೆಗೂ 10 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ.