ಭಾರತ ಕ್ರಿಕೆಟ್‌ ತಂಡಕ್ಕೆ ಡಬಲ್‌ ಆಘಾತ!

| Published : Jan 30 2024, 02:03 AM IST / Updated: Jan 30 2024, 12:57 PM IST

India

ಸಾರಾಂಶ

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ವೇಳೆ ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾಗೆ ಗಾಯಗೊಂಡಿದ್ದು, ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಸರ್ಫರಾಜ್‌ ಖಾನ್‌, ವಾಷಿಂಗ್ಟನ್‌ ಸುಂದರ್‌, ಸೌರಭ್‌ ಕುಮಾರ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಹೈದರಾಬಾದ್‌: ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋಲಿನ ಆಘಾತ ಎದುರಾದ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಇಬ್ಬರು ಪ್ರಮುಖ ಆಟಗಾರರಾದ ಕೆ.ಎಲ್‌.ರಾಹುಲ್‌ ಹಾಗೂ ರವೀಂದ್ರ ಜಡೇಜಾ ಗಾಯದ ಸಮಸ್ಯೆಯ ಕಾರಣ, 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ.

ಭಾನುವಾರ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ ವೇಗವಾಗಿ ಒಂಟಿ ರನ್‌ ಕದಿಯುವ ವೇಳೆ ಜಡೇಜಾ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ರಾಹುಲ್ ಬಲ ತೊಡೆಯ ನೋವಿನಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ. 

ಕಳೆದ ವರ್ಷ ಐಪಿಎಲ್‌ ವೇಳೆಯೂ ತೊಡೆ ಗಾಯಕ್ಕೆ ತುತ್ತಾಗಿದ್ದ ರಾಹುಲ್‌, ಶಸ್ತ್ರಚಿಕಿತ್ಸೆಗೆ ಒಳಗಾಗಿ 4 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ರಾಹುಲ್‌ ಹಾಗೂ ಜಡೇಜಾ ಇಬ್ಬರೂ ಮೊದಲ ಟೆಸ್ಟ್‌ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು. ರಾಹುಲ್ ಮೊದಲ ಇನ್ನಿಂಗ್ಸಲ್ಲಿ 86 ರನ್‌ ಗಳಿಸಿದರೆ, ಜಡೇಜಾ 87 ರನ್‌ ಗಳಿಸಿ, ಪಂದ್ಯದಲ್ಲಿ ಒಟ್ಟು 5 ವಿಕೆಟ್‌ ಸಹ ಕಿತ್ತಿದ್ದರು. 

ಇವರಿಬ್ಬರು 3ನೇ ಟೆಸ್ಟ್‌ ವೇಳೆಗೆ ತಂಡ ಕೂಡಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಬಿಸಿಸಿಐನಿಂದ ಸ್ಪಷ್ಟನೆ ಸಿಕ್ಕಿಲ್ಲ.

ತಂಡಕ್ಕೆ ಸರ್ಫರಾಜ್‌ ಸೇರ್ಪಡೆ
ದೇಸಿ ಕ್ರಿಕೆಟ್‌ನಲ್ಲಿ ರಾಶಿ ರಾಶಿ ರನ್‌ ಸಿಡಿಸಿ ನಿರಂತರವಾಗಿ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುತ್ತಿದ್ದ ಮುಂಬೈನ ಸರ್ಫರಾಜ್‌ ಖಾನ್‌ಗೆ ಕೊನೆಗೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. 

ಇದೇ ಮೊದಲ ಬಾರಿಗೆ ಅವರು ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲೂ ಭಾರತ ‘ಎ’ ಪರ ಸರ್ಫರಾಜ್‌ ಶತಕ ಸಿಡಿಸಿದ್ದರು.

ವಿರಾಟ್‌ ಕೊಹ್ಲಿ 2ನೇ ಟೆಸ್ಟ್‌ಗೂ ಅಲಭ್ಯರಾಗಲಿರುವ ಕಾರಣ, ಸರ್ಫರಾಜ್‌ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. 

ಇದೇ ವೇಳೆ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಹಾಗೂ ದೇಸಿ ಕ್ರಿಕೆಟ್‌ನ ಅನುಭವಿ ಸ್ಪಿನ್ನರ್‌, ಈ ಹಿಂದೆ ಭಾರತ ತಂಡದೊಂದಿಗೆ ನೆಟ್‌ ಬೌಲರ್‌ ಆಗಿ ಕಾಣಿಸಿಕೊಂಡಿದ್ದ ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ರನ್ನೂ 2ನೇ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದೆ.

5ನೇ ಸ್ಥಾನ ಕುಸಿದ ಭಾರತ!
2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತ ಬಳಿಕ ತಂಡದ ಗೆಲುವಿನ ಪ್ರತಿಶತ 46.66ಕ್ಕೆ ಇಳಿದಿದೆ. 

ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್‌ ವಿರುದ್ಧ ಬಾಕಿ ಇರುವ 4 ಟೆಸ್ಟ್‌ಗಳಲ್ಲಿ ಭಾರತ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.