ಸಾರಾಂಶ
ಪಟಿಯಾಲಾ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಸೋಮವಾರ ಭಾರೀ ಹೈಡ್ರಾಮಾ ನಡೆದಿದೆ. ತಾರಾ ಕುಸ್ತಿಪಟು ವಿನೇಶ್ ಫೋಗಟ್ ಒಲಿಂಪಿಕ್ಸ್ ಟ್ರಯಲ್ಸ್ ವಿಚಾರದಲ್ಲಿ ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದರಿಂದ ಕೆಲ ಗಂಟೆಗಳ ಕಾಲ ಟ್ರಯಲ್ಸ್ ಸ್ಥಗಿತಗೊಂಡ ಘಟನೆ ನಡೆಯಿತು. ಬಳಿಕ ಡೋಪಿಂಗ್ ಪರೀಕ್ಷೆಗೆ ಮೂತ್ರದ ಸ್ಯಾಂಪಲ್ ನೀಡದೆ ವಿನೇಶ್ ತೆರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
3 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ವಿನೇಶ್ ಈ ಬಾರಿ ಒಲಿಂಪಿಕ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ 50 ಮತ್ತು 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೋರಿದ್ದರು.
ಜೊತೆಗೆ 53 ಕೆ.ಜಿ. ವಿಭಾಗಕ್ಕೆ ಒಲಿಂಪಿಕ್ಸ್‌ಗೂ ಮುನ್ನ ಮತ್ತೊಮ್ಮೆ ಟ್ರಯಲ್ಸ್ ನಡೆಸಬೇಕೆಂದು ಒತ್ತಾಯಿಸಿದ್ದು, ಈ ಬಗ್ಗೆ ಆಯೋಜಕರು ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದರಿಂದಾಗಿ ಸುಮಾರು ಎರಡೂವರೆ ಗಂಟೆಗಾಲ ಟ್ರಯಲ್ಸ್ ಸ್ಥಗಿತಗೊಂಡಿತು.ಆದರೆ ಜಾಗತಿಕ ಕುಸ್ತಿ ಸಂಸ್ಥೆಯ ನಿಯಮಗಳ ಪ್ರಕಾರ ಒಂದೇ ವಿಭಾಗದಲ್ಲಿ ಸ್ಪರ್ಧೆಗೆ ಅವಕಾಶವಿದೆ.
ಇದರಿಂದ ಗೊಂದಲ ಉಂಟಾಗಿತ್ತು. ಆದರೂ ಆಯೋಜಕರು ವಿನೇಶ್‌ಗೆ 2 ವಿಭಾಗಗಳಲ್ಲೂ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರು.
ಯಾಕೆ ಪಟ್ಟು?
ವಿನೇಶ್ ಈ ಮೊದಲು 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಈ ವಿಭಾಗದಲ್ಲಿ ಅಂತಿಮ್ ಪಂಘಲ್‌ಗೆ ಈಗಾಗಲೇ ಒಲಿಂಪಿಕ್ಸ್ ಕೋಟಾ ಲಭಿಸಿದೆ.
ಹೀಗಾಗಿ ಈಗ 53 ಕೆ.ಜಿ. ವಿಭಾಗದಲ್ಲಿ ಗೆದ್ದರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗೆ ಅವಕಾಶ ಸಿಗಲ್ಲ ಎಂಬುದು ವಿನೇಶ್‌ಗೆ ಗೊತ್ತಿತ್ತು. ಅಲ್ಲದೆ, ಭಾರತ ಒಲಿಂಪಿಕ್ ಸಂಸ್ಥೆ ಈಗಾಗಲೇ 53 ಕೆ.ಜಿ. ವಿಭಾಗದಲ್ಲಿ ಗೆದ್ದವರು ಹಾಗೂ ಅಂತಿಮ್ ನಡುವೆ ಮತ್ತೊಮ್ಮೆ ಟ್ರಯಲ್ಸ್ ನಡೆಸುತ್ತೇವೆ ಎಂದಿತ್ತು.
ಆದರೂ ಡಬ್ಲ್ಯುಎಫ್‌ಐ ಆಯ್ಕೆ ಮಾನದಂಡ ಬದಲಿಸಬಹುದು ಎಂಬ ಭೀತಿಯಿಂದ ಟ್ರಯಲ್ಸ್ ಬಗ್ಗೆ ಲಿಖಿತ ಭರವಸೆಗೆ ಪಟ್ಟು ಹಿಡಿದಿದ್ದರು.
50 ಕೆಜಿ ಸ್ಪರ್ಧೆಯಲ್ಲಿ ವಿನೇಶ್‌ಗೆ ಗೆಲುವು: ತಾತ್ಕಾಲಿಕ ಸಮಿತಿಯು ಬೇಡಿಕೆಗೆ ಸಮ್ಮತಿಸಿದ ಬಳಿಕ ವಿನೇಶ್ 2 ವಿಭಾಗದಲ್ಲೂ ಸ್ಪರ್ಧಿಸಿದರು. 50 ಕೆ.ಜಿ. ವಿಭಾಗದಲ್ಲಿ ಶಿವಾನಿ ವಿರುದ್ಧ 11-6 ರಿಂದ ಗೆದ್ದು, ಮುಂದಿನ ತಿಂಗಳು ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡರು. ಆದರೆ 53 ಕೆ.ಜಿ. ವಿಭಾಗದಲ್ಲಿ ಅಂಜು ವಿರುದ್ಧ ಸೋಲನುಭವಿಸಿದರು.