ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಕ್ಕೆ ಐಫಿಲ್‌ ಟವರ್‌ ಕಬ್ಬಿಣ ಬಳಕೆ!

| Published : Feb 09 2024, 01:45 AM IST / Updated: Feb 09 2024, 09:03 AM IST

ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಕ್ಕೆ ಐಫಿಲ್‌ ಟವರ್‌ ಕಬ್ಬಿಣ ಬಳಕೆ | Kannada Prabha
ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಕ್ಕೆ ಐಫಿಲ್‌ ಟವರ್‌ ಕಬ್ಬಿಣ ಬಳಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಬಹುನಿರೀಕ್ಷಿತ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳಿಗೆ ವಿಶ್ವ ಪ್ರಸಿದ್ಧ ಐಫಿಲ್‌ ಟವರ್‌ನ ಕಬ್ಬಿಣದ ಚೂರುಗಳ ಬಳಕೆ ಮಾಡಲಾಗುತ್ತಿದೆ.

ಪ್ಯಾರಿಸ್‌: ಬಹುನಿರೀಕ್ಷಿತ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳಿಗೆ ವಿಶ್ವ ಪ್ರಸಿದ್ಧ ಐಫಿಲ್‌ ಟವರ್‌ನ ಕಬ್ಬಿಣದ ಚೂರುಗಳ ಬಳಕೆ ಮಾಡಲಾಗುತ್ತಿದೆ ಎಂದು ಕ್ರೀಡಾಕೂಟದ ಆಯೋಜಕರು ಗುರುವಾರ ಬಹಿರಂಗಪಡಿಸಿದ್ದಾರೆ.

137 ವರ್ಷಗಳ ಇತಿಹಾಸವಿರುವ ಟವರ್‌ನ ನವೀಕರಣ ಕಾಲ ಕಾಲಕ್ಕೆ ನಡೆಸಲಾಗುತ್ತಿದ್ದು, ಈ ಸಂದರ್ಭ ತೆಗೆದ ಕಬ್ಬಿಣದ ತೊಲೆಗಳನ್ನು ಐಫಿಲ್‌ ಟವರ್‌ ನಿರ್ವಹಣಾ ಸಂಸ್ಥೆ ಸಂಗ್ರಹಿಸಿಟ್ಟಿದೆ. ಇದನ್ನು ಈ ಬಾರಿ ಒಲಿಂಪಿಕ್ಸ್‌ನ ಪದಕ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. 

ಪ್ರತಿ ಪದಕದ ಮಧ್ಯೆದಲ್ಲಿ ಐಫಿಲ್‌ ಟವರ್‌ನಿಂದ ತೆಗೆದ 18 ಗ್ರಾಂ ಕಬ್ಬಿಣದ ಚೂರು ಅಳವಡಿಸಲಾಗುತ್ತಿದೆ. ಒಲಿಂಪಿಕ್ಸ್‌ಗೆ 2600, ಪ್ಯಾರಾಲಿಂಪಿಕ್ಸ್‌ಗೆ 2400 ಸೇರಿ ಒಟ್ಟು 5084 ಪದಕಗಳನ್ನು ತಯಾರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ ಒಲಿಂಪಿಕ್ಸ್ ಜುಲೈ 26ರಿಂದ ಆ.11ರ ವರೆಗೆ, ಪ್ಯಾರಾಲಿಂಪಿಕ್ಸ್ ಆ.28ರಿಂದ ಸೆ.8ರ ವರೆಗೆ ನಡೆಯಲಿದೆ.

ಚಿನ್ನದ ಪದಕ 529 ಗ್ರಾಂ!
ಪ್ಯಾರಿಸ್‌ ಒಲಿಂಪಿಕ್ಸ್‌ ವಿಜೇತರಿಗೆ ಲಭಿಸುವ ಚಿನ್ನದ ಪದಕ 529 ಗ್ರಾಂ ತೂಕ ಇರಲಿದೆ. ಆದರೆ ಇದು ಶುದ್ಧ ಚಿನ್ನ ಅಲ್ಲ. ಪದಕವನ್ನು ಬೆಳ್ಳಿಯಿಂದ ತಯಾರಿಸಲಾಗಿದ್ದು, 6 ಗ್ರಾಂ ಚಿನ್ನದ ಲೇಪನ ಇರಲಿದೆ. ಇನ್ನು, ಬೆಳ್ಳಿ ಪದಕ 525 ಗ್ರಾಂ, ಕಂಚಿನ ಪದಕ 455 ಗ್ರಾಂ ತೂಕವಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.