ಸಾರಾಂಶ
ನವದೆಹಲಿ: ಇತ್ತೀಚೆಗೆ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಭರ್ಜರಿ ಸಿಕ್ಸರ್ ಮೂಲಕ ಒಡೆದ ಕಾರಿನ ಗಾಜನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲೈಸಿ ಪೆರ್ರಿ ಅವರಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಶೀರ್ಷಿಕೆ ಪ್ರಾಯೋಜಕರಾಗಿರುವ ಟಾಟಾ ಸಂಸ್ಥೆ ಶುಕ್ರವಾರ ಉಡುಗೊರೆಯಾಗಿ ನೀಡಿದೆ.
ಮಾ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಯುಪಿ ತಂಡದ ದೀಪ್ತಿ ಶರ್ಮಾ ಎಸೆತದಲ್ಲಿ ಪೆರ್ರಿ ಸಿಕ್ಸರ್ ಬಾರಿಸಿದ್ದರು.
ಪೆರ್ರಿ ಹೊಡೆದಿದ್ದ ಚೆಂಡು ಬೌಂಡರಿ ಲೈನ್ ಬಳಿ ನಿಲ್ಲಿಸಲಾಗಿದ್ದ ಟಾಟಾ ಪಂಚ್ ಇವಿ ಕಾರಿನ ಗಾಜಿಗೆ ಬಡಿದಿತ್ತು. ಇದನ್ನು ನೋಡಿ ಸ್ವತಃ ಪೆರ್ರಿ ಶಾಕ್ ಆಗಿದ್ದರು.
ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿತ್ತು.ಅಂದು ಪೆರ್ರಿ ಒಡೆದು ಹಾಕಿದ್ದ ಗಾಜನ್ನು ತೆಗೆದ ಟಾಟಾ ಸಂಸ್ಥೆ ಅದನ್ನು ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದ ಬಳಿಕ ಪೆರ್ರಿಗೆ ಉಡುಗೊರೆಯಾಗಿ ನೀಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.