ಡಬ್ಲ್ಯುಪಿಎಲ್‌ನಲ್ಲಿ ಮೊದಲ ಸಲ ಆರ್‌ಸಿಬಿ ನಾಕೌಟ್‌ ಪ್ರವೇಶ

| Published : Mar 13 2024, 02:06 AM IST

ಸಾರಾಂಶ

ಮುಂಬೈ ವಿರುದ್ಧ 07 ವಿಕೆಟ್‌ ಜಯ. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 4 ಜಯ, ಅಂಕಪಟ್ಟಿಯಲ್ಲಿ 3ನೇ ಸ್ಥಾನದೊಂದಿಗೆ ಆರ್‌ಸಿಬಿ ಪ್ಲೇ-ಆಫ್‌ಗೆ ಎಂಟ್ರಿ.

ನವದೆಹಲಿ: ನಿರ್ಣಾಯಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ಆರ್‌ಸಿಬಿ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ನಾಕೌಟ್‌ ಪ್ರವೇಶಿಸಿದೆ. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಆರ್‌ಸಿಬಿ, ಈ ಬಾರಿ 8 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಅಗ್ರ-3ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಮುಂಬೈ 8 ಪಂದ್ಯಗಳಲ್ಲಿ 3ನೇ ಸೋಲಿನೊಂದಿಗೆ 2ನೇ ಸ್ಥಾನದಲ್ಲೇ ಇದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ, ಎಲೈಸಿ ಪೆರ್ರಿ ಮಾರಕ ದಾಳಿಗೆ ನಲುಗಿ 19 ಓವರಲ್ಲಿ 113 ರನ್‌ಗೆ ಸರ್ವಪತನ ಕಂಡಿತು. ಹೇಲಿ ಮ್ಯಾಥ್ಯೂಸ್‌(26) ಹಾಗೂ ಸಜನಾ(30) ಮೊದಲ ವಿಕೆಟ್‌ಗೆ 43 ರನ್‌ ಜೊತೆಯಾಟವಾಡಿದರು. ಆದರೆ 6ನೇ ಓವರ್‌ನ ಕೊನೆ ಎಸೆತದಲ್ಲಿ ಮ್ಯಾಥ್ಯೂಸ್‌ ವಿಕೆಟ್‌ ಬೀಳುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಪೆರ್ರಿ 4 ಓವರಲ್ಲಿ ಕೇವಲ 15 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು.ಸುಲಭ ಗುರಿಯನ್ನು ಬೆನ್ನತ್ತಿದರೂ ಆರ್‌ಸಿಬಿ ನಿಧಾನ ಆರಂಭ ಪಡೆದು ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿತ್ತು. 6.1 ಓವರಲ್ಲಿ 39ಕ್ಕೆ 3 ವಿಕೆಟ್‌ ಕಳೆದುಕೊಂಡ ಬಳಿಕ ರಿಚಾ ಘೋಷ್‌(ಔಟಾಗದೆ 36) ಹಾಗೂ ಪೆರ್ರಿ(ಔಟಾಗದೆ 40) ತಂಡವನ್ನು ಗೆಲುವಿನ ದಡ ಸೇರಿಸಿದರು.ಸ್ಕೋರ್‌: ಮುಂಬೈ 19 ಓವರಲ್ಲಿ 113/10 (ಸಜನಾ 30, ಮ್ಯಾಥ್ಯೂಸ್‌ 26, 6-15), ಆರ್‌ಸಿಬಿ 15 ಓವರಲ್ಲಿ 115/3 (ರಿಚಾ ಔಟಾಗದೆ 36, ಪೆರ್ರಿ ಔಟಾಗದೆ 40, ಶಬ್ನಿಮ್‌ 1-19)01ನೇ ಬೌಲರ್‌: ಡಬ್ಲ್ಯುಪಿಎಲ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 6 ವಿಕೆಟ್‌ ಕಿತ್ತ ಮೊದಲ ಬೌಲರ್‌ ಎಲೈಸಿ ಪೆರ್ರಿ.