ಚೆಸ್‌ ಒಲಿಂಪಿಯಾಡ್‌ನಲ್ಲಿ ಕಳೆದ ಸಲ ಭಾರತ ಗೆದ್ದಿದ್ದ ಟ್ರೋಫಿ ಕಳೆದ ಒಂದು ತಿಂಗಳಿಂದ ನಾಪತ್ತೆ!

| Published : Sep 21 2024, 02:04 AM IST / Updated: Sep 21 2024, 04:31 AM IST

ಸಾರಾಂಶ

ಟ್ರೋಫಿಯನ್ನು ಹಂಗೇರಿಗೆ ತಲುಪಿಸುವಂತೆ ಎಐಸಿಎಫ್‌ಗೆ ಫಿಡೆ ಸೂಚಿಸಿತ್ತು. ಆದರೆ ಟ್ರೋಫಿ ಕಳೆದ ಒಂದು ತಿಂಗಳಿಂದ ಕಾಣಿಸುತ್ತಿಲ್ಲ ಎಂದು ಎಐಸಿಎಫ್‌ ತಿಳಿಸಿದೆ. ಹೀಗಾಗಿ ನಕಲಿ ಟ್ರೋಫಿಯೊಂದನ್ನು ಸಿದ್ಧಪಡಿಸುತ್ತಿದೆ.

ಚೆನ್ನೈ: 2022ರ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಗೆದ್ದಿದ್ದ ಟ್ರೋಫಿ ಚೆನ್ನೈನಲ್ಲಿರುವ ಮುಖ್ಯ ಕಚೇರಿಯಿಂದ ನಾಪತ್ತೆಯಾಗಿದೆ. ಈ ಬಗ್ಗೆ ಭಾರತ ಚೆಸ್‌ ಫೆಡರೇಷನ್‌(ಎಐಸಿಎಫ್‌) ಪೊಲೀಸ್‌ ಠಾಣೆಗೆ ದೂರು ನೀಡಿದೆ. 

ಕಳೆದ ಸಲ ಭಾರತ ಮುಕ್ತ, ಮಹಿಳಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್‌ ಆಗಿತ್ತು. ಇದಕ್ಕಾಗಿ ಟ್ರೋಫಿಯನ್ನೂ ಪಡೆದಿತ್ತು. ಆದರೆ ಇದು ರೋಲಿಂಗ್‌ ಟ್ರೋಫಿಯಾಗಿದ್ದು, ಪ್ರತಿ ವರ್ಷ ವಿಜೇತರಿಗೆ ಅದೇ ಟ್ರೋಫಿ ನೀಡಲಾಗುತ್ತದೆ. ಈ ಬಾರಿ ಒಲಿಂಪಿಯಾಡ್‌ ಹಂಗೇರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಚೆಸ್‌ನ ಜಾಗತಿಕ ಸಮಿತಿಯಾಗಿರುವ ಫಿಡೆ, ಕಳೆದ ಬಾರಿ ಪಡೆದಿದ್ದ ಟ್ರೋಫಿಯನ್ನು ಹಂಗೇರಿಗೆ ತಲುಪಿಸುವಂತೆ ಎಐಸಿಎಫ್‌ಗೆ ಸೂಚಿಸಿತ್ತು. ಆದರೆ ಟ್ರೋಫಿ ಕಳೆದ ಒಂದು ತಿಂಗಳಿಂದ ಕಾಣಿಸುತ್ತಿಲ್ಲ ಎಂದು ಎಐಸಿಎಫ್‌ ತಿಳಿಸಿದೆ. ಹೀಗಾಗಿ ನಕಲಿ ಟ್ರೋಫಿಯೊಂದನ್ನು ಸಿದ್ಧಪಡಿಸುತ್ತಿದೆ.

ಚೆಸ್‌: ಭಾರತ ಮಹಿಳಾ ತಂಡಕ್ಕೆ ಮೊದಲ ಸೋಲು

ಬುಡಾಪೆಸ್ಟ್‌(ಹಂಗೇರಿ): ಇಲ್ಲಿ ನಡೆಯುತ್ತಿರುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಮಹಿಳಾ ತಂಡ ಮೊದಲ ಸೋಲನುಭವಿಸಿದೆ. ಗುರುವಾರ ರಾತ್ರಿ ನಡೆದ 8ನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಪೋಲೆಂಡ್‌ ವಿರುದ್ಧ 1.5-2.5 ಅಂಕಗಳಿಂದ ಪರಾಭವಗೊಂಡಿತು. ಕೂಟದಲ್ಲಿ ಇನ್ನು 3 ಸುತ್ತಿನ ಪಂದ್ಯಗಳು ನಡೆಯಲಿದ್ದು, ಭಾರತ ಚಿನ್ನ ಗೆಲ್ಲಬೇಕಿದ್ದರೆ ಎಲ್ಲಾ ಸುತ್ತಿನಲ್ಲೂ ಗೆಲ್ಲಬೇಕಿದೆ. 

ಮತ್ತೊಂದೆಡೆ ಪುರುಷರ ತಂಡ ಸತತ 8ನೇ ಸುತ್ತಿನಲ್ಲೂ ಗೆಲುವು ಸಾಧಿಸಿತು. ಗುರುವಾರ ಭಾರತಕ್ಕೆ ಇರಾನ್‌ ವಿರುದ್ಧ 3.5-0.5 ಅಂಕಗಳಲ್ಲಿ ಜಯಗಳಿಸಿತು. ಸದ್ಯ ಭಾರತ 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮುಂದಿನ 3 ಸುತ್ತಿನಲ್ಲೂ ಗೆದ್ದು ಚಾಂಪಿಯನ್‌ ಎನಿಸಿಕೊಳ್ಳುವ ಕಾತರದಲ್ಲಿದೆ.