ಸಾರಾಂಶ
ಪ್ಯಾರಿಸ್: ಮೇ 26ರಿಂದ ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ ಸ್ಪರ್ಧಿಸದಿರಲು ಬ್ರಿಟನ್‌ನ ಎಮ್ಮಾ ರಾಡುಕಾನು ನಿರ್ಧರಿಸಿದ್ದಾರೆ. ಮಾಜಿ ಯುಎಸ್ ಓಪನ್ ಚಾಂಪಿಯನ್, 21 ವರ್ಷದ ರಾಡುಕಾನು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ ಆಯ್ದ ಟೂರ್ನಿಗಳಲ್ಲಷ್ಟೇ ಆಡುತ್ತಿದ್ದಾರೆ.
ಜುಲೈನಲ್ಲಿ ನಡೆಯಲಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ ಸ್ಪರ್ಧಿಸಲು ಅಗತ್ಯವಿರುವ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವುದಾಗಿ ಎಮ್ಮಾ ತಿಳಿಸಿದ್ದಾರೆ.ಒಲಿಂಪಿಕ್ಸ್‌ಗೆ: ಯೂಕಿ ಅಥವಾ ಬಾಲಾಜಿ ಜತೆ ರೋಹನ್ ಬೋಪಣ್ಣ ಸ್ಪರ್ಧೆ
ನವದೆಹಲಿ: ಭಾರತದ ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯೂಕಿ ಭಾಂಬ್ರಿ ಅಥವಾ ಶ್ರೀರಾಮ್ ಬಾಲಾಜಿ ಜೊತೆ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಬೋಪಣ್ಣಗೆ ತಮ್ಮ ಜೊತೆಗಾರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಈ ಬಗ್ಗೆ ಸದ್ಯದಲ್ಲೇ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಬೋಪಣ್ಣ ಆಯ್ಕೆಗೆ ಒಪ್ಪಿಗೆ ಸೂಚಿಸಲು ಎಐಟಿಪಿ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಜು.26ರಿಂದ ಆ.11ರ ವರೆಗೂ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ.