ಸಾರಾಂಶ
ನವದೆಹಲಿ: ಐಪಿಎಲ್‌ನಲ್ಲಿ ಇನ್ನೇನಿದ್ದರೂ ಯುವ ನಾಯಕರದ್ದೇ ದರ್ಬಾರು. ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂ.ಎಸ್.ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪೈಕಿ ಯಾರೂಬ್ಬರೂ ನಾಯಕರಾಗಿ ಕಾಣಿಸಿಕೊಳ್ಳುವುದಿಲ್ಲ.
ಧೋನಿ ಚೆನ್ನೈ ಹಾಗೂ ಪುಣೆ ತಂಡದ ನಾಯಕರಾಗಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. 5 ಬಾರಿ ಚೆನ್ನೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ, 2 ಸಲ ಚಾಂಪಿಯನ್ಸ್ ಲೀಗ್ ಗೆಲ್ಲಿಸಿಕೊಟ್ಟಿದ್ದಾರೆ.
ಅವರ ನಾಯಕತ್ವದಲ್ಲಿ ಪುಣೆ ತಂಡ ಐಪಿಎಲ್ ಫೈನಲ್ ಸಹ ಪ್ರವೇಶಿಸಿತ್ತು. ಧೋನಿ 226 ಐಪಿಎಲ್ ಪಂದ್ಯಗಳಲ್ಲಿ ನಾಯಕರಾಗಿದ್ದಾರೆ.
2013ರಿಂದ 2023ರ ವರೆಗೂ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ರೋಹಿತ್, ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 158 ಪಂದ್ಯಗಳಲ್ಲಿ ಅವರ ತಂಡ ಮುನ್ನಡೆಸಿದ್ದಾರೆ.
ಇನ್ನು 2011ರಿಂದ ಆರ್‌ಸಿಬಿ ನಾಯಕರಾಗಿದ್ದ ವಿರಾಟ್, 2022ರಲ್ಲಿ ನಾಯಕತ್ವ ತ್ಯಜಿಸಿದ್ದರು. ಕಳೆದ ಆವೃತ್ತಿಯಲ್ಲಿ ಮತ್ತೆ ಕೆಲ ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಒಟ್ಟಾರೆ 143 ಪಂದ್ಯಗಳಲ್ಲಿ ಅವರು ಆರ್‌ಸಿಬಿಯ ನಾಯಕರಾಗಿದ್ದಾರೆ.