2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ ಭಾರತದಿಂದ ಟಾರ್ಗೆಟ್‌ 399

| Published : Feb 05 2024, 01:47 AM IST / Updated: Feb 05 2024, 12:41 PM IST

ಸಾರಾಂಶ

399 ರನ್‌ ಗುರಿ ಪಡೆದಿರುವ ಇಂಗ್ಲೆಂಡ್‌ನ ಗೆಲುವಿಗೆ ಇನ್ನು 332 ರನ್‌ ಅಗತ್ಯವಿದ್ದರೆ, ಭಾರತದ ಜಯಕ್ಕೆ ಇನ್ನೂ 9 ವಿಕೆಟ್‌ ಬೇಕಿದೆ.

ವಿಶಾಖಪಟ್ಟಣಂ: ಒಂದೆಡೆ ಪ್ರಖರ ವೇಗಿಗಳು ಹಾಗೂ ತಜ್ಞ ಸ್ಪಿನ್ನರ್‌ಗಳೊಂದಿಗೆ ದಾಳಿಗೆ ಸಜ್ಜಾಗಿರುವ ಭಾರತ. ಮತ್ತೊಂದೆಡೆ ‘ಬಾಜ್‌ಬಾಲ್‌’ ಶೈಲಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಕಾಯುತ್ತಿರುವ ಪ್ರವಾಸಿ ಇಂಗ್ಲೆಂಡ್‌. 

ಉಭಯ ತಂಡಗಳ ನಡುವಿನ 2ನೇ ಟೆಸ್ಟ್‌ ಪಂದ್ಯ ಕುತೂಹಲ ಘಟ್ಟ ತಲುಪಿದ್ದು, ಗೆಲುವಿಗಾಗಿ ಇತ್ತಂಡಗಳಿಂದ ಪ್ರಬಲ ಪೈಪೋಟಿ ಕಂಡುಬರುತ್ತಿದೆ. 

399 ರನ್‌ ಗುರಿ ಪಡೆದಿರುವ ಇಂಗ್ಲೆಂಡ್‌ನ ಗೆಲುವಿಗೆ ಇನ್ನು 332 ರನ್‌ ಅಗತ್ಯವಿದ್ದರೆ, ಭಾರತದ ಜಯಕ್ಕೆ ಇನ್ನೂ 9 ವಿಕೆಟ್‌ ಬೇಕಿದೆ.

ಬೃಹತ್‌ ಗುರಿಯಾಗಿದ್ದರಿಂದ ಭಾರತಕ್ಕೇ ಈ ಪಂದ್ಯದಲ್ಲಿ ಗೆಲುವು ಸಿಗುವ ಸಾಧ್ಯತೆ ಹೆಚ್ಚು. ಆದರೆ ಆಕ್ರಮಣಕಾರಿ ಆಟವಾಡುವ ಇಂಗ್ಲೆಂಡ್‌ಗೆ ಈ ಗುರಿ ಅಸಾಧ್ಯವೇನೂ ಅಲ್ಲ. ತಂಡದ ಇತ್ತೀಚಿನ ಬಾಜ್‌ಬಾಲ್‌ ಶೈಲಿಯನ್ನು ನೋಡಿದವರಿಗೆ ಇದರ ಅರಿವಿದೆ. 

ಸೋಮವಾರದ ಮೊದಲ ಅವಧಿ ಇತ್ತಂಡಗಳಿಗೂ ನಿರ್ಣಾಯಕವೆನಿಸಿದೆ. ಸದ್ಯ ಬೃಹತ್‌ ಗುರಿ ಪಡೆದ ಇಂಗ್ಲೆಂಡ್‌ 3ನೇ ದಿನದಂತ್ಯಕ್ಕೆ 14 ಓವರಲ್ಲಿ 1 ವಿಕೆಟ್ ಕಳೆದುಕೊಂಡು 67 ರನ್‌ ಕಲೆಹಾಕಿದೆ. ಡಕೆಟ್‌ 28ಕ್ಕೆ ವಿಕೆಟ್‌ ಒಪ್ಪಿಸಿದರೂ, ಜ್ಯಾಕ್‌ ಕ್ರಾವ್ಲಿ(29) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಗಿಲ್‌ ಅಬ್ಬರ: ಇದಕ್ಕೂ ಮೊದಲು 2ನೇ ದಿನ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಗಳಿಸಿದ್ದ ಭಾರತ ಭಾನುವಾರ 255ಕ್ಕೆ ಆಲೌಟಾಯಿತು. ಒಂದಿಬ್ಬರನ್ನೇ ನೆಚ್ಚಿಕೊಂಡು ಆಡುವ ಭಾರತದ ಪರಿಪಾಠ ಮತ್ತೆ ಮುಂದುವರಿಯಿತು. 

ರೋಹಿತ್‌(13) ಹಿಂದಿನ ದಿನದ ಮೊತ್ತಕ್ಕೆ ಒಂದೂ ರನ್‌ ಸೇರಿಸದೆ ಔಟಾದರೆ, ಮೊದಲ ಇನ್ನಿಂಗ್ಸ್‌ನ ದ್ವಿಶತಕ ವೀರ ಜೈಸ್ವಾಲ್‌ರ ಗಳಿಕೆ 17 ರನ್‌. ಲಯದ ಸಮಸ್ಯೆ ಎದುರಿಸುತ್ತಿರುವ ಶ್ರೇಯಸ್‌ ಅಯ್ಯರ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 

ಅವರು 29 ರನ್‌ ಗಳಿಸಿ ಹಾರ್ಟ್ಲಿಗೆ ವಿಕೆಟ್‌ ಒಪ್ಪಿಸಿದರು. ರಜತ್‌ ಪಾಟೀದಾರ್‌ 9ಕ್ಕೆ ಔಟಾದರು. 122ಕ್ಕೆ 4 ವಿಕೆಟ್‌ ಕಳೆದುಕೊಂಡ ಬಳಿಕ ಶುಭ್‌ಮನ್‌ ಗಿಲ್‌-ಅಕ್ಷರ್‌ ಪಟೇಲ್‌(45) 89 ರನ್‌ ಜೊತೆಯಾಟವಾಡಿದ್ದು ತಂಡಕ್ಕೆ ಆಸರೆಯಾಯಿತು. 

ಈ ನಡುವೆ ಅಕ್ಷರ್‌ ಕೂಡಾ ಔಟಾದ ಬಳಿಕ ಏಕಾಂಗಿಯಾಗಿ ಅಬ್ಬರಿಸಿದ ಗಿಲ್‌, ಟೆಸ್ಟ್‌ನಲ್ಲಿ 3ನೇ ಶತಕ ಪೂರ್ಣಗೊಳಿಸಿದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು 147 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ನೊಂದಿಗೆ 104 ರನ್‌ ಗಳಿಸಿ ಔಟಾದರು. 

ಅಶ್ವಿನ್‌ 29 ರನ್‌ ಸಿಡಿಸಿ ತಂಡವನ್ನು 250ರ ಗಡಿ ದಾಟಿಸಿದರು. ಹಾರ್ಟ್ಲಿ 4, ರೆಹಾನ್‌ ಅಹ್ಮದ್‌ 3, ಜೇಮ್ಸ್‌ ಅ್ಯಂಡರ್‌ಸನ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 396/10 ಮತ್ತು 255/10 (ಗಿಲ್‌ 104, ಅಕ್ಷರ್‌ 45, ಹಾರ್ಟ್ಲಿ 4-77), ಇಂಗ್ಲೆಂಡ್‌ 253/10 ಮತ್ತು 67/1 (ಕ್ರಾವ್ಲಿ 29*, ಡಕೆಟ್‌ 28, ಅಶ್ವಿನ್‌ 1-8)

ಗಿಲ್ 10ನೇ ಅಂ.ರಾ. ಶತಕ: ಶುಭ್‌ಮನ್‌ ಗಿಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10ನೇ ಶತಕ ಪೂರ್ತಿಗೊಳಿಸಿದರು. ಏಕದಿನದಲ್ಲಿ 6, ಟಿ20ಯಲ್ಲಿ 1, ಟೆಸ್ಟ್‌ನಲ್ಲಿ 3ನೇ ಶತಕ ಬಾರಿಸಿದರು. ಅವರು 24 ವರ್ಷಕ್ಕೂ ಮುನ್ನ 10 ಶತಕ ಬಾರಿಸಿದ 3ನೇ ಭಾರತೀಯ. ಸಚಿನ್‌ ತೆಂಡುಲ್ಕರ್‌ ತಮ್ಮ 24 ವರ್ಷ ಪೂರ್ಣಗೊಳ್ಳುವ ಮುನ್ನ 30, ವಿರಾಟ್‌ ಕೊಹ್ಲಿ 21 ಶತಕ ಬಾರಿಸಿದ್ದರು.

02ನೇ ಬ್ಯಾಟರ್‌: ಗಿಲ್‌ 2022ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಶತಕ ಬಾರಿಸಿದ 2ನೇ ಭಾರತೀಯ. ಕೊಹ್ಲಿ ಕೂಡಾ 10 ಸೆಂಚುರಿ ಸಿಡಿಸಿದ್ದಾರೆ.

ಇಂಗ್ಲೆಂಡ್‌ ಗೆದ್ದರೆ ಇತಿಹಾಸ!
399 ರನ್‌ ಗುರಿ ಬೆನ್ನತ್ತಿ ಗೆದ್ದರೆ ಇಂಗ್ಲೆಂಡ್‌ ಇತಿಹಾಸ ಸೃಷ್ಟಿಸಲಿದೆ. ಈ ವರೆಗಿನ ಕೆಲ ದಾಖಲೆಗಳ ವಿವರ ಇಲ್ಲಿದೆ. 

  • ಏಷ್ಯಾದಲ್ಲಿ 4ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿಯಾಗಿ ಬೆನ್ನತ್ತಿದ ರನ್‌ 395. 2021ರಲ್ಲಿ ಚಿತ್ತಗಾಂಗ್‌ನಲ್ಲಿ ಬಾಂಗ್ಲಾ ವಿರುದ್ಧ ವೆಸ್ಟ್‌ಇಂಡೀಸ್‌ ಈ ಸಾಧನೆ ಮಾಡಿತ್ತು.  
  • ಭಾರತದ ವಿರುದ್ಧ 4ನೇ ಇನ್ನಿಂಗ್ಸ್‌ನ ಯಶಸ್ವಿ ರನ್‌ ಚೇಸ್‌ 378. 2022ರಲ್ಲಿ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಗೆದ್ದಿತ್ತು. 
  • ಭಾರತದಲ್ಲಿ 4ನೇ ಇನ್ನಿಂಗ್ಸ್‌ನಲ್ಲಿ ತಂಡವೊಂದದ ಯಶಸ್ವಿ ರನ್‌ ಚೇಸ್‌ 387. ಚೆನ್ನೈನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು.