ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಎಸ್ಟೋನಿಯಾದ ಸಾಹಿಲ್‌ ಚೌಹಾಣ್‌. ಕೇವಲ 27 ಎಸೆತದಲ್ಲಿ ದಾಖಲಾಯ್ತು ಸೆಂಚುರಿ. ಸಾಹಿಲ್‌ ರೌದ್ರಾವಾತಾರಕ್ಕೆ ನಲುಗಿದ ಸೈಪ್ರಸ್‌.

ಎಪಿಸ್ಕೋಪಿ(ಸೈಪ್ರಸ್‌): ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ಭಾರತೀಯ ಮೂಲದ ಎಸ್ಟೋನಿಯಾ ಕ್ರಿಕೆಟಿಗ ಸಾಹಿಲ್‌ ಚೌಹಾಣ್‌ ಬರೆದಿದ್ದಾರೆ. ಸೈಪ್ರಸ್‌ ದೇಶದ ವಿರುದ್ಧದ 6 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಸೋಮವಾರ ಸಾಹಿಲ್‌, ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದರು.

ಆ ಮೂಲಕ 2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿಯ ಕ್ರಿಸ್‌ ಗೇಲ್‌ 30 ಎಸೆತಗಳಲ್ಲಿ ಶತಕ ಸಿಡಿಸಿ ಬರೆದಿದ್ದ ದಾಖಲೆಯನ್ನು ಮುರಿದರು. ಇನ್ನು ಅಂತಾರಾಷ್ಟ್ರೀಯ ಟಿ20ಯಲ್ಲಿ ನಮೀಬಿಯಾದ ಲಾಫ್ಟಿ ಈಟನ್‌ ನೇಪಾಳ ವಿರುದ್ಧ ಇದೇ ವರ್ಷ ಫೆಬ್ರವರಿಯಲ್ಲಿ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಸಾಹಿಲ್‌ ಇದೀಗ ಅಂ.ರಾ.ಟಿ20ಯಲ್ಲೂ ವೇಗದ ಶತಕದ ಸರದಾರ ಎನಿಸಿದ್ದಾರೆ. ಸೈಪ್ರಸ್‌ ನೀಡಿದ್ದ 192 ರನ್‌ ಗುರಿಯನ್ನು ಬೆನ್ನತ್ತಿದ ಎಸ್ಟೋನಿಯಾ, 13 ಓವರಲ್ಲೇ 4 ವಿಕೆಟ್‌ಗೆ 194 ರನ್‌ ಗಳಿಸಿತು. ಸಾಹಿಲ್‌ ಕೇವಲ 41 ಎಸೆತದಲ್ಲಿ 6 ಬೌಂಡರಿ, 18 ಸಿಕ್ಸರ್‌ಗಳೊಂದಿಗೆ ಔಟಾಗದೆ 144 ರನ್‌ ಸಿಡಿಸಿದರು. ಸಿಕ್ಸರ್‌ನಲ್ಲೂ ವಿಶ್ವದಾಖಲೆ:

ಅಂ.ರಾ.ಟಿ20 ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆಯೂ ಸಾಹಿಲ್‌ ಪಾಲಾಯಿತು. 18 ಸಿಕ್ಸರ್‌ ಸಿಡಿಸಿದ ಅವರು, ಅಫ್ಘಾನಿಸ್ತಾನದ ಹಜರತ್ತುಲ್ಲಾ ಝಝಾಯ್‌ ದಾಖಲೆಯನ್ನು ಮುರಿದರು. ಝಝಾಯ್‌ 2019ರಲ್ಲಿ ಐರ್ಲೆಂಡ್‌ ವಿರುದ್ಧ 16 ಸಿಕ್ಸರ್‌ ಸಿಡಿಸಿದ್ದರು.

ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನ ಇನ್ನಿಂಗ್ಸಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಕ್ರಿಸ್‌ ಗೇಲ್‌ ಹೆಸರಲ್ಲಿದೆ. ಗೇಲ್‌ 2017ರಲ್ಲಿ ಬಾಂಗ್ಲಾ ಟಿ20 ಲೀಗ್‌ನ ಡೈನಮೈಟ್ಸ್‌ ವಿರುದ್ಧದ ಪಂದ್ಯದಲ್ಲಿ ರಂಗ್‌ಪುರ್‌ ಪರ 18 ಸಿಕ್ಸರ್‌ ಬಾರಿಸಿದ್ದರು. ಸಾಹಿಲ್‌, ಗೇಲ್‌ರ ದಾಖಲೆ ಸರಿಗಟ್ಟಿದ್ದಾರೆ.