ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಮುಂಜಾನೆವರೆಗೂ ಸಂಭ್ರಮ ಮುಂದುವರಿಯಿತು. ರಾಜ್ಯದ ವಿವಿಧ ಕಡೆ, ಅಮೆರಿಕ, ಲಂಡನ್‌ಲ್ಲೂ ಅಭಿಮಾನಿಗಳು ಕುಣಿದಾಡಿದರು.

ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ 17ನೇ ಆವೃತ್ತಿ ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ ಆರ್‌ಸಿಬಿ ಗೆದ್ದ ಬಳಿಕ ಅಭಿಮಾನಿಗಳು ಸಂಭ್ರಮಾಚರಣೆ ಮೂಲಕ ಧೂಳೆಬ್ಬಿಸಿದ್ದು, ಸಾಮಾಜಿಕ ತಾಣಗಳಲ್ಲೂ ಸಂಚಲನ ಮೂಡಿಸಿದ್ದಾರೆ. 

ಪಂದ್ಯದ ಆರಂಭದಿಂದಲೇ ಅಭಿಮಾನಿಗಳು ಮೈದಾನದ ಒಳಗೆ ಕುಣಿದು ಕುಪ್ಪಳಿಸುತ್ತಿದ್ದರು. ಮಹತ್ವದ ಪಂದ್ಯ ಗೆದ್ದು ಆರ್‌ಸಿಬಿ ಪ್ಲೇ-ಆಫ್‌ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಮಧ್ಯರಾತ್ರಿ 4 ಗಂಟೆ ವರೆಗೂ ಕುಣಿದಾಡಿ, ಕೇಕೆ ಹಾಕಿ ಸಂಭ್ರಮಿಸಿದರು. 

ರಸ್ತೆಯುದ್ದಕ್ಕೂ ಸೇರಿದ್ದ ಅಪಾರ ಪ್ರಮಾಣದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಆರ್‌ಸಿಬಿ ಆಟಗಾರರಿದ್ದ ಬಸ್‌ ಕ್ರೀಡಾಂಗಣದಿಂದ ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳ ಜೈಕಾರ ಕೂಗಿ, ನೆಚ್ಚಿನ ಆಟಗಾರರನ್ನು ಹುರಿದುಂಬಿಸಿದರು.ಅಲ್ಲದೆ ನಗರದ ಗಲ್ಲಿ ಗಲ್ಲಿಗಳಲ್ಲೂ ಮುಂಜಾನವರೆಗೂ ಪಟಾಕಿ ಹಚ್ಚಿ ಸಂಭ್ರಮಾಚರಣೆ ನಡೆಸಿದರು. 

ರಾಜ್ಯದ ವಿವಿಧ ಭಾಗಗಳಲ್ಲೂ ಬೈಕ್‌ ರ್‍ಯಾಲಿ, ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂತು. ಇನ್ನು, ಅಮೆರಿಕ, ಲಂಡನ್‌, ಕೆನಡಾ, ಆಸ್ಟ್ರೇಲಿಯಾ, ಸೌದಿಯಲ್ಲೂ ಆರ್‌ಸಿಬಿ ಅಭಿಮಾನಿಗಳು ಸಂಭ್ರಮದಲ್ಲಿ ಕುಣಿದಾಡಿದರು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ವಿಡಿಯೋಗಳು ವೈರಲ್ ಆಗಿವೆ. ಮದುವೆ ಮನೆಯಲ್ಲೂ ಪಂದ್ಯವನ್ನು ನೇರ ಪ್ರದರ್ಶನ ಮಾಡಿ, ಕುಣಿದಾಡುತ್ತಿರುವ ವಿಡಿಯೋಗಳು ಕೂಡಾ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.