ಸಾರಾಂಶ
ಬೆಂಗಳೂರು: ಈ ಬಾರಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಯುವ ಕ್ರಿಕೆಟಿಗ ಮನೋಜ್ ಭಾಂಡಗೆ ಸ್ಫೋಟಕ ಆಟವಾಡುತ್ತಿದ್ದಾರೆ. ಮೈಸೂರು ವಾರಿಯರ್ಸ್ ತಂಡದಲ್ಲಿರುವ 25 ವರ್ಷದ ಮನೋಜ್ ಗುರುವಾರ ಶಿವಮೊಗ್ಗ ವಿರುದ್ಧ 16 ಎಸೆತಗಳಲ್ಲಿ ಔಟಾಗದೆ 42, ಶುಕ್ರವಾರ ಬೆಂಗಳೂರು ವಿರುದ್ಧ 33 ಎಸೆತಗಳಲ್ಲಿ ಔಟಾಗದೆ 58 ರನ್ ಸಿಡಿಸಿದ್ದಾರೆ.
ಎರಡೂ ಪಂದ್ಯಗಳಲ್ಲಿ ಫಿನಿಶರ್ ಆಗಿ ಮಿಂಚಿದ್ದಾರೆ. ಆದರೆ ಮನೋಜ್ ಕಳೆದ 2 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದರೂ, ಆಡಲು ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಅಭಿಮಾನಿಗಳು ಆರ್‌ಸಿಬಿ ಫ್ರಾಂಚೈಸಿಯನ್ನು ಸಾಮಾಜಿಕ ತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರೀತಿ ಸ್ಫೋಟಕ ಆಡವಾಡುತ್ತಿದ್ದ ಆಟಗಾರನನ್ನು 2 ವರ್ಷಗಳಿಂದ ಬೆಂಚ್ ಕಾಯಿಸುತ್ತಿದ್ದೀರಿ. ಉತ್ತಮ ಆಟಗಾರರಿಗೆ ಅವಕಾಶ ಕೊಡಲ್ಲ ಎಂದು ಟೀಕಿಸಿದ್ದಾರೆ. ಮನೋಜ್‌ರನ್ನು ಆರ್‌ಸಿಬಿ 2023ರ ಐಪಿಎಲ್‌ಗೂ ಮುನ್ನ ₹20 ಲಕ್ಷ ನೀಡಿ ಖರೀದಿಸಿತ್ತು. ಆದರೆ ಈ ವರೆಗೂ ಒಂದೂ ಪಂದ್ಯವಾಡಲು ಅವಕಾಶ ಸಿಕ್ಕಿಲ್ಲ.
ಡೋಪಿಂಗ್: ಶ್ರೀಲಂಕಾದ ನಿರೋಶನ್ ಅಮಾನತು
ಕೊಲಂಬೊ: ಶ್ರೀಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ವೇಳೆ ಉದ್ದೀಪನ ಮದ್ದು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಲಂಕಾದ ವಿಕೆಟ್ ಕೀಪರ್ ಬ್ಯಾಟರ್ ನಿರೋಶನ್ ಡಿಕ್‌ವೆಲ್ಲಾ ಲಂಕಾ ಕ್ರಿಕೆಟ್ ಮಂಡಳಿಯಿಂದ ಅಮಾನತುಗೊಂಡಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಎಲ್‌ಪಿಎಲ್‌ನಲ್ಲಿ ನಿರೋಶನ್ ಗಾಲೆ ಮಾರ್ವೆಲ್ಸ್ ತಂಡಕ್ಕೆ ನಾಯಕನಾಗಿದ್ದರು.
ಟೂರ್ನಿ ಮಧ್ಯೆ ಡೋಪ್ ತೆಗೆದುಕೊಂಡ ಆರೋಪದ ಮೇಲೆ ನಿರೋಶನ್‌ರನ್ನು ಅಮಾನತುಗೊಳಿಸಲಾಗಿದೆ. 31 ವರ್ಷದ ನಿರೋಶನ್ ಕಳೆದ ವರ್ಷ ಮಾರ್ಚ್‌ನಲ್ಲಿ ಲಂಕಾ ಪರ ಕೊನೆ ಬಾರಿ ಆಡಿದ್ದರು.