ನೀರಜ್‌ಗೆ ಚಿನ್ನ, ರಾಜ್ಯದ ಮನುಗೆ ಬೆಳ್ಳಿ: ಮತ್ತೆ 3 ಚಿನ್ನ ಗೆದ್ದ ಕರ್ನಾಟಕ ಅಥ್ಲೀಟ್ಸ್‌

| Published : May 16 2024, 12:51 AM IST / Updated: May 16 2024, 04:41 AM IST

ನೀರಜ್‌ಗೆ ಚಿನ್ನ, ರಾಜ್ಯದ ಮನುಗೆ ಬೆಳ್ಳಿ: ಮತ್ತೆ 3 ಚಿನ್ನ ಗೆದ್ದ ಕರ್ನಾಟಕ ಅಥ್ಲೀಟ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಫೆಡರೇಶನ್‌ ಕಪ್‌ನ ಜಾವೆಲಿನ್‌ ಥ್ರೋನಲ್ಲಿ ಚೋಪ್ರಾಗೆ ಕನಾರ್ಟಕದ ಮನು ತೀವ್ರ ಪೈಪೋಟಿ ನೀಡಿದರು. ಆದರೆ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಭುವನೇಶ್ವರ್‌: ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಫೆಡರೇಶನ್‌ ಕಪ್ ಅಥ್ಲೆಟಿಕ್ಸ್‌ ಕೂಟದ ಜಾವೆಲಿನ್‌ ಎಸೆತದಲ್ಲಿ ನಿರೀಕ್ಷೆಯಂತೆಯೇ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಅವರಿಗೆ ಕರ್ನಾಟಕದ ಡಿ.ಪಿ.ಮನು ತೀವ್ರ ಪೈಪೋಟಿ ನೀಡಿದ್ದು, ಅಲ್ಪದರಲ್ಲೇ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಮೊದಲ ಪ್ರಯತ್ನದಲ್ಲೇ 82.06 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದ ಮನು, ಮೊದಲ 3 ಪ್ರಯತ್ನಗಳ ಬಳಿಕ ಅಗ್ರಸ್ಥಾನದಲ್ಲಿದ್ದರು. ಆದರೆ ಹರ್ಯಾಣದ ನೀರಜ್‌ 4ನೇ ಎಸೆತದಲ್ಲಿ 82.27 ಮೀ. ದಾಖಲಿಸಿ ಚಿನ್ನ ತಮ್ಮದಾಗಿಸಿಕೊಂಡರು. ಇದರೊಂದಿಗೆ ಮನು ಅವರ ಒಲಿಂಪಿಕ್ಸ್‌ ಪ್ರವೇಶ ಕನಸು ಕೂಡಾ ಭಗ್ನಗೊಂಡಿತು. ಒಲಿಂಪಿಕ್ಸ್‌ ಅರ್ಹತೆಗಾಗಿ 85.50 ಮೀ. ದೂರ ದಾಖಲಿಸಬೇಕಿತ್ತು. ಭಾರಿ ನಿರೀಕ್ಷೆ ಮೂಡಿಸಿದ್ದ ಕಿಶೋರ್‌ ಜೆನಾ(75.49 ಮೀ.) 5ನೇ ಸ್ಥಾನಿಯಾದರು.

ಪೂವಮ್ಮ, ಅಭಿನಯ, ಸ್ನೇಹಾಗೆ ಸ್ವರ್ಣ

ಕೂಟದ ಕೊನೆ ದಿನವಾರ ಕರ್ನಾಟಕ 3 ಚಿನ್ನ ಗೆದ್ದಿತು. ಮಹಿಳೆಯರ 400 ಮೀ. ಸ್ಪರ್ಧೆಯಲ್ಲಿ ಪೂವಮ್ಮ ರಾಜು 53.32 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ(1.77 ಮೀ.) ಕೂಡಾ ಬಂಗಾರ ಪಡೆದರು. ಮತ್ತೊಂದು ಚಿನ್ನ 100 ಮೀ. ಓಟದಲ್ಲಿ 11.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಸ್ನೇಹಾಗೆ ಲಭಿಸಿತು. 4 ದಿನಗಳ ಕೂಟದಲ್ಲಿ ಕರ್ನಾಟಕ ಒಟ್ಟು 5 ಚಿನ್ನ, 3 ಬೆಳ್ಳಿಯೊಂದಿಗೆ ಅಭಿಯಾನ ಕೊನೆಗೊಳಿಸಿತು.