ಸಾರಾಂಶ
ಟೂರ್ನಿಗೆ ಅಂತಿಮ ತಂಡ ಪ್ರಕಟಕ್ಕೆ ಇಂದೇ ಗಡುವು. ಒಂದು ವೇಳೆ ಬೂಮ್ರಾ ತಂಡದಿಂದ ಹೊರಗುಳಿದರೆ ಅವರ ಬದಲು ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆಯಿದೆ.
ನವದೆಹಲಿ: ಭಾರತದ ತಾರಾ ವೇಗಿ ಜಸ್‌ಪ್ರೀತ್ ಬೂಮ್ರಾ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದ್ದಾರೊ ಇಲ್ಲವೊ ಎಂಬುದು ಮಂಗಳವಾರ ಗೊತ್ತಾಗಲಿದೆ.ಬೆನ್ನು ನೋವಿನಿಂದ ಬಳಲುತ್ತಿರುವ ಬೂಮ್ರಾ ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಈಗಾಗಲೇ ಅವರ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐಗೆ ವರದಿ ಸಲ್ಲಿಕೆಯಾಗಿದೆ.
ಮತ್ತೊಂದೆಡೆ ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡ ಪ್ರಕಟಿಸಲು ಮಂಗಳವಾರ ಕೊನೆ ದಿನ. ಹೀಗಾಗಿ ಬೂಮ್ರಾರನ್ನು ಬಿಸಿಸಿಐ ತಂಡದಲ್ಲೇ ಉಳಿಸಿಕೊಳ್ಳಲಿದೆಯೋ ಅಥವಾ ಅವರನ್ನು ಕೈಬಿಟ್ಟು ಬೇರೆ ಆಟಗಾರನಿಗೆ ಮಣೆ ಹಾಕಲಿದೆಯೋ ಎಂಬ ಕುತೂಹಲವಿದೆ.
ಕೆಲ ವರದಿಗಳ ಪ್ರಕಾರ, ಬೂಮ್ರಾ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾದರೂ ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬೂಮ್ರಾ ತಂಡದಿಂದ ಹೊರಗುಳಿದರೆ ಅವರ ಬದಲು ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆಯಿದೆ.