ಸಾರಾಂಶ
ಕೂಚ್ ಬೆಹಾರ್ ಅಂಡರ್-19 ಪ್ರ.ದರ್ಜೆ ಟೂರ್ನಿ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ಜಯ ಸಾಧಿಸಿದೆ. ಮುಂಬೈ ಮೊದಲ ಇನ್ನಿಂಗ್ಸ್ 380 ರನ್‌ಗೆ ಆಲೌಟಾಗಿತ್ತು. ಕರ್ನಾಟಕ 223 ಓವರಲ್ಲಿ 890/8 ಡಿಕ್ಲೇರ್ ಮಾಡಿಕೊಂಡಿತ್ತು.
ಶಿವಮೊಗ್ಗ: ಕೂಚ್ ಬಿಹಾರ್ ರಾಷ್ಟ್ರೀಯ ಅಂಡರ್-19 ಪಂದ್ಯಾವಳಿಯಲ್ಲಿ ಕರ್ನಾಟಕ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ಮುಕ್ತಾಯಗೊಂಡ ಮುಂಬೈ ವಿರುದ್ಧದ ಫೈನಲ್ ಪಂದ್ಯ ಡ್ರಾಗೊಂಡರೂ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ರಾಜ್ಯ ಚಾಂಪಿಯನ್ ಆಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಆಯುಷ್ ಮಾತ್ರೆ ಶತಕದ ನೆರವಿನಿಂದ ಮುಂಬೈ 113.5 ಓವರ್‌ಗಳಲ್ಲಿ 380 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಕರ್ನಾಟಕ 2 ದಿನಗಳಿಗೆ ಹೆಚ್ಚು ಕಾಲ ಒಟ್ಟು 223 ಓವರ್ ಬ್ಯಾಟ್ ಮಾಡಿ, 8 ವಿಕೆಟ್‌ಗೆ ಬರೋಬ್ಬರಿ 890 ರನ್ ಕಲೆಹಾಕಿ ಮುಂಬೈ ಪಡೆಯ ಬೆವರಿಳಿಸಿತು.
ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಔಟಾಗದೆ 404 ರನ್ ಬಾರಿಸಿ ದಾಖಲೆ ಬರೆದರು. ರಾಜ್ಯ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುತ್ತಿದ್ದಂತೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ಪ್ರಖರ್- ಕಾರ್ತಿಕ್ ಅರ್ಧಶತಕದ ನೆರವಿಂದ ಮೊದಲ ವಿಕೆಟ್‌ಗೆ 109 ರನ್ ಪೇರಿಸಿತ್ತು.
ನಂತರ ಪ್ರಖರ್ ಜೊತೆಯಾದ ಹರ್ಷಿಲ್ ಧರ್ಮಾನಿ 169 ರನ್ ಸಿಡಿಸಿದ್ದರಿಂದ ರಾಜ್ಯ ಬೃಹತ್ ಮುನ್ನಡೆಯತ್ತ ಸಾಗಲು ನೆರವಾಯಿತು. ನಂತರ ಪ್ರಖರ್ ಜೊತೆಯಾದ ಕಾರ್ತಿಕೇಯ ಕೆ.ಪಿ. 72 ರನ್ ಕೊಡುಗೆ ನೀಡಿದರು. ಭಾನುವಾರ 3ನೇ ದಿನದಂತ್ಯಕ್ಕೆ ಪ್ರಖರ್ 256 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ರಾಜ್ಯ ತಂಡ 6 ವಿಕೆಟ್‌ಗೆ 626 ರನ್ ಗಳಿಸಿತ್ತು.
ಸಮರ್ಥ್ ಸಾಥ್: ಕೊನೆಯ ದಿನವಾದ ಸೋಮವಾರ ಹಾರ್ದಿಕ್ ರಾಜ್ 51, ಯುವರಾಜ್ 4 ರನ್ ಗಳಿಸಿ ಔಟಾದಾಗ, ಪ್ರಖರ್ ಇನ್ನೂ ತ್ರಿಶತಕ ದಾಖಲಿಸಿರಲಿಲ್ಲ. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಮರ್ಥ್ ಎನ್, ಪ್ರಖರ್ ಜೊತೆ ಕ್ರೀಸ್‌ಗೆ ಅಂಟಿಕೊಂಡರು.
ಬಹಳ ತಾಳ್ಮೆಯಿಂದ ರನ್ ಕಲೆಹಾಕಿದ ಪ್ರಖರ್, 299* ರನ್‌ಗಳೊಂದಿಗೆ ಭೋಜನ ವಿರಾಮಕ್ಕೆ ತೆರಳಿದರು. ತಮ್ಮ ಜೊತೆಗಾರನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ ಪ್ರಖರ್ ತ್ರಿಶತಕ ಮಾತ್ರವಲ್ಲ, 400 ರನ್ ದಾಟಲು ಸಹ ಸಾಧ್ಯವಾಯಿತು.
ಸಮರ್ಥ್ 135 ಎಸೆತ ಎದುರಿಸಿ ಔಟಾಗದೆ 55 ರನ್ ಗಳಿಸಿದರು. ಮುರಿಯದ 9ನೇ ವಿಕೆಟ್‌ಗೆ ಈ ಜೋಡಿ 173 ರನ್ ಸೇರಿಸಿತು. ಪ್ರಖರ್ 638 ಎಸೆತದಲ್ಲಿ 46 ಬೌಂಡರಿ, 3 ಸಿಕ್ಸರ್‌ನೊಂದಿಗೆ 404 ರನ್ ಗಳಿಸಿ ಔಟಾಗದೆ ಉಳಿದರು. ಮುಂಬೈ 9 ಬೌಲರ್‌ಗಳನ್ನು ಬಳಸಿತು.
ಸ್ಕೋರ್: ಮುಂಬೈ 113.5 ಓವರಲ್ಲಿ 380, ಕರ್ನಾಟಕ 223 ಓವರಲ್ಲಿ 890/8 ಡಿ., (ಪ್ರಖರ್ 404*, ಹರ್ಷಿಲ್ 169, ಸಮರ್ಥ್ 55*, ಪ್ರೇಮ್ 3-136)