ಸಾರಾಂಶ
2ನೇ ಟೆಸ್ಟ್ ಪಂದ್ಯವನ್ನು ಮೂರೇ ದಿನಕ್ಕೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಭಾರತ, ಕೊನೆಗೂ ಪಂದ್ಯದ ಕೊನೆಯ ದಿನ 7 ವಿಕೆಟ್‌ಗಳಿಂದ ಗೆದ್ದುಕೊಂಡು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಶುಭ್‌ಮನ್ ಗಿಲ್‌ರ ನಾಯಕತ್ವದಲ್ಲಿ ತಂಡಕ್ಕೆ ದೊರೆತ ಮೊದಲ ಟೆಸ್ಟ್ ಸರಣಿ ಗೆಲುವು
ನವದಹಲಿ: ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಮೂರೇ ದಿನಕ್ಕೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಭಾರತ, ಕೊನೆಗೂ ಪಂದ್ಯದ ಕೊನೆಯ ದಿನ 7 ವಿಕೆಟ್‌ಗಳಿಂದ ಗೆದ್ದುಕೊಂಡು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಶುಭ್‌ಮನ್ ಗಿಲ್‌ರ ನಾಯಕತ್ವದಲ್ಲಿ ತಂಡಕ್ಕೆ ದೊರೆತ ಮೊದಲ ಟೆಸ್ಟ್ ಸರಣಿ ಗೆಲುವು ಇದು.
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಗಿಲ್, 5 ಪಂದ್ಯಗಳ ಸರಣಿಯನ್ನು 2-2ರಲ್ಲಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದರು. ತವರಿನಲ್ಲಿ ಮೊದಲ ಬಾರಿಗೆ ತಂಡ ಮುನ್ನಡೆಸಿದ ಯುವ ನಾಯಕ, ಮೊದಲ ಸರಣಿಯಲ್ಲೇ ಯಶಸ್ಸು ಕಂಡಿದ್ದಾರೆ.
ವಿಂಡೀಸ್ 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿ, ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳುವುದರ ಜೊತೆ ಭಾರತದ ಗೆಲುವಿಗೆ 121 ರನ್‌ಗಳ ಗುರಿ ನೀಡಿತ್ತು. 4ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದ್ದ ಭಾರತ, 5ನೇ ದಿನವಾದ ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇದ್ದ 58 ರನ್ ಕಲೆಹಾಕಿ ಗೆಲುವು ಸಾಧಿಸಿತು.
ಕೆ.ಎಲ್.ರಾಹುಲ್ ಔಟಾಗದೆ 58 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಾಯಿ ಸುದರ್ಶನ್ 39 ರನ್ ಗಳಿಸಿ ಔಟಾದ ಬಳಿಕ ಗಿಲ್, ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್‌ನೊಂದಿಗೆ 13 ರನ್ ಗಳಿಸಿ, ಗೆಲುವಿಗೆ ಇನ್ನು 13 ರನ್ ಬೇಕಿದ್ದಾಗ ಔಟಾದರು. ರಾಹುಲ್ ಆಕರ್ಷಕ ಬೌಂಡರಿಯೊಂದಿಗೆ ಗೆಲುವಿನ ರನ್ ಬಾರಿಸಿದರು. ಧೃವ್ ಜುರೆಲ್ ಔಟಾಗದೆ 6 ರನ್ ಗಳಿಸಿದರು.
ಸರಣಿಯಲ್ಲಿ ರಾಹುಲ್ ಒಟ್ಟು 192 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 219 ರನ್‌ಗಳೊಂದಿಗೆ ಅಗ್ರಸ್ಥಾನಿಯಾದರು. ಕುಲ್ದೀಪ್ ಯಾದವ್ 12 ವಿಕೆಟ್‌ಗಳೊಂದಿಗೆ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು.
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 5 ವಿಕೆಟ್‌ಗೆ 518 ರನ್ ಗಳಿಸಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ವಿಂಡೀಸನ್ನು ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗೆ ಆಲೌಟ್ ಮಾಡಿದ ಭಾರತ, ಫಾಲೋ ಆನ್ ಹೇರಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಜಾನ್ ಕ್ಯಾಂಬೆಲ್ ಹಾಗೂ ಶಾಯ್ ಹೋಪ್‌ರ ಶತಕಗಳ ನೆರವಿನಿಂದ ವಿಂಡೀಸ್ 390 ರನ್ ಕಲೆಹಾಕಿ, ಭಾರತ ಮತ್ತೆ ಬ್ಯಾಟ್ ಮಾಡುವಂತೆ ಮಾಡಿತು.
ಸ್ಕೋರ್: ಭಾರತ 518/5 ಡಿ. ಹಾಗೂ 124/3 (ರಾಹುಲ್ 58*, ಸುದರ್ಶನ್ 39, ಚೇಸ್ 2-36)
ಪಂದ್ಯಶ್ರೇಷ್ಠ: ಕುಲ್ದೀಪ್ ಯಾದವ್, ಸರಣಿ ಶ್ರೇಷ್ಠ: ರವೀಂದ್ರ ಜಡೇಜಾ
ವಿಂಡೀಸ್ ವಿರುದ್ಧ ಭಾರತಕ್ಕೆ
ಸತತ 10ನೇ ಸರಣಿ ಜಯ!
ವೆಸ್ಟ್‌ಇಂಡೀಸ್ ವಿರುದ್ಧ ಭಾರತ ತಂಡಕ್ಕಿದು ಸತತ 10ನೇ ಟೆಸ್ಟ್ ಸರಣಿ ಗೆಲುವು. 2002ರ ಬಳಿಕ ವಿಂಡೀಸ್ ವಿರುದ್ಧ ಭಾರತ ಸರಣಿ ಸೋತಿಲ್ಲ. ಇನ್ನು ತಂಡವೊಂದರ ವಿರುದ್ಧ ಸತತವಾಗಿ ಅತಿಹೆಚ್ಚು ಟೆಸ್ಟ್ ಸರಣಿ ಗೆದ್ದ ಜಂಟಿ ದಾಖಲೆಯನ್ನು ಭಾರತ ಬರೆದಿದೆ. ದಕ್ಷಿಣ ಆಫ್ರಿಕಾ ಸಹ ವಿಂಡೀಸ್ ವಿರುದ್ಧ 1998ರಿಂದ 2024ರ ವರೆಗೂ ಸತತ 10 ಸರಣಿ ಜಯಿಸಿದೆ.
ಇನ್ನು ವಿಂಡೀಸ್ ವಿರುದ್ಧ ಭಾರತ ಸತತ 27 ಟೆಸ್ಟ್‌ಗಳಲ್ಲಿ ಅಜೇಯವಾಗಿ ಉಳಿದಿದೆ. ಕೊನೆ ಬಾರಿಗೆ ಭಾರತ ತಂಡ ವಿಂಡೀಸ್ ವಿರುದ್ಧ ಟೆಸ್ಟ್ ಸೋತಿದ್ದು 2002ರಲ್ಲಿ.
ಡೆಲ್ಲಿಯಲ್ಲಿ ಭಾರತ ಸತತ
14 ಟೆಸ್ಟ್‌ಗಳಲ್ಲಿ ಅಜೇಯ!
ನವದೆಹಲಿಯ ಕೋಟ್ಲಾ ಕ್ರೀಡಾಂಗಣದಲ್ಲಿ ಭಾರತ ಸತತ 14 ಟೆಸ್ಟ್‌ಗಳಲ್ಲಿ ಅಜೇಯವಾಗಿ ಉಳಿದಿದೆ. ತಂಡ ಇಲ್ಲಿ ಕೊನೆಯ ಬಾರಿಗೆ ಸೋತಿದ್ದು 1987ರಲ್ಲಿ ವಿಂಡೀಸ್ ವಿರುದ್ಧ. 1993ರಿಂದ ಇಲ್ಲಿ ಭಾರತ 14 ಪಂದ್ಯಗಳನ್ನು ಆಡಿದ್ದು 12ರಲ್ಲಿ ಗೆದ್ದು, 2ರಲ್ಲಿ ಡ್ರಾ ಸಾಧಿಸಿದೆ.
ತವರಿನಲ್ಲಿ ಹೆಚ್ಚು ಗೆಲುವು:
3ನೇ ಸ್ಥಾನಕ್ಕೇರಿದ ಭಾರತ
ತವರಿನಲ್ಲಿ ಅತಿಹೆಚ್ಚು ಟೆಸ್ಟ್ ಗೆಲುವುಗಳನ್ನು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೇರಿದೆ. ವಿಂಡೀಸ್ ವಿರುದ್ಧದ ಈ ಜಯ, ತವರಿನಲ್ಲಿ ಭಾರತಕ್ಕೆ ಸಿಕ್ಕ 122ನೇ ಜಯ. ಆ ಮೂಲಕ ತವರಿನಲ್ಲಿ 121 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾವನ್ನು ಭಾರತ ಹಿಂದಿಕ್ಕಿತು. 262 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ, 241 ಜಯ ಸಾಧಿಸಿರುವ ಇಂಗ್ಲೆಂಡ್ ಮೊದಲೆರಡು ಸ್ಥಾನಗಳಲ್ಲಿವೆ.
ಡಬ್ಲ್ಯುಟಿಸಿ: 3ನೇ ಸ್ಥಾನ
ಕಾಯ್ದುಕೊಂಡ ಭಾರತ
2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನ ಕಾಯ್ದುಕೊಂಡಿದೆ. 7 ಪಂದ್ಯಗಳನ್ನು ಆಡಿರುವ ಭಾರತ 4ರಲ್ಲಿ ಜಯ ಸಾಧಿಸಿ, ಶೇ.61.90 ಗೆಲುವಿನ ಪ್ರತಿಶತ ಹೊಂದಿದೆ. ಆಸ್ಟ್ರೇಲಿಯಾ ಶೇ.100ರಷ್ಟು ಗೆಲುವಿನ ಪ್ರತಿಶತದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ 66.67% ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.
ಭಾರತ ತನ್ನ ಮುಂದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಮೊದಲ ಟೆಸ್ಟ್ ನ.14ರಿಂದ ಕೋಲ್ಕತಾದಲ್ಲಿ ನಡೆದರೆ, ನ.22ರಿಂದ ಗುವಾಹಟಿಯಲ್ಲಿ 2ನೇ ಟೆಸ್ಟ್ ನಡೆಯಲಿದೆ.
ಡೆಲ್ಲಿ ಪಿಚ್ ಬಗ್ಗೆ ಕೋಚ್
ಗಂಭೀರ್ ಅಸಮಾಧಾನ!
ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಬಗ್ಗೆ ಭಾರತದ ಪ್ರಧಾನ ಕೋಚ್ ಗೌತಮ್ ಗಂಭೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಚ್ ವೇಗಿಗಳಿಗೆ ನೆರವಾಗದೆ ಇದ್ದಿದ್ದಕ್ಕೆ ಗಂಭೀರ ಆಕ್ಷೇಪಿಸಿದ್ದು, ದ.ಆಫ್ರಿಕಾ ವಿರುದ್ಧದ ಸರಣಿಗೆ ತನ್ನ ವೇಗಿಗಳಿಗೆ ಅನುಕೂಲವಾಗುವಂತಹ ಪಿಚ್‌ಗಳನ್ನು ಒದಗಿಸುವಂತೆ ಬಂಗಾಳ, ಅಸ್ಸಾಂ ಕ್ರಿಕೆಟ್ ಸಂಸ್ಥೆಗಳಿಗೆ ಭಾರತ ತಂಡದ ಆಡಳಿತ ಒತ್ತಾಯಿಸಲಿದೆ ಎನ್ನಲಾಗಿದೆ.