ಇಂದಿನಿಂದ ಭಾರತ vs ನ್ಯೂಜಿಲೆಂಡ್‌ ಟೆಸ್ಟ್‌ : ಮಳೆ ಭೀತಿ ನಡುವೆ ಪಂದ್ಯಕ್ಕೆ ಸಜ್ಜಾದ ಬೆಂಗಳೂರು

| Published : Oct 16 2024, 12:54 AM IST / Updated: Oct 16 2024, 04:11 AM IST

ಇಂದಿನಿಂದ ಭಾರತ vs ನ್ಯೂಜಿಲೆಂಡ್‌ ಟೆಸ್ಟ್‌ : ಮಳೆ ಭೀತಿ ನಡುವೆ ಪಂದ್ಯಕ್ಕೆ ಸಜ್ಜಾದ ಬೆಂಗಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಹೈವೋಲ್ಟೇಜ್‌ ಸರಣಿಯ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ. ಕೊಹ್ಲಿ, ರೋಹಿತ್‌, ಕೆ.ಎಲ್‌.ರಾಹುಲ್‌ ಮೇಲೆ ಎಲ್ಲರ ಕಣ್ಣು. ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ದೃಷ್ಟಿಯಲ್ಲಿ ಭಾರತಕ್ಕೆ ಮಹತ್ವದ ಸರಣಿ

 ಬೆಂಗಳೂರು :  ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಹೈವೋಲ್ಟೇಜ್‌ ಟೆಸ್ಟ್‌ ಸರಣಿಗೆ ವೇದಿಕೆ ಸಜ್ಜುಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ಇತ್ತಂಡಗಳ ನಡುವಿನ 3 ಪಂದ್ಯಗಳ ಸರಣಿಯ ಟೆಸ್ಟ್‌ ಆರಂಭಗೊಳ್ಳಲಿದೆ. 

ಆದರೆ ಪಂದ್ಯದ ಫಲಿತಾಂಶ ಏನಾಗಲಿದೆ ಎಂಬುದಕ್ಕಿಂತಲೂ ಪಂದ್ಯಕ್ಕೆ ಮಳೆ ಕೃಪೆ ತೋರಲಿದೆಯೇ ಎಂಬುದೇ ಸದ್ಯ ಎಲ್ಲರಲ್ಲಿರುವ ಪ್ರಶ್ನೆ.ನಗರದದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚು. ಇದರ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣ 2 ವರ್ಷಗಳ ಬಳಿಕ ಮತ್ತೊಮ್ಮೆ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ. 

ಟೆಸ್ಟ್‌ ಚಾಂಪಿಯನ್‌ಶಿಪ್‌ ದೃಷ್ಟಿಯಲ್ಲಿ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ. ಅದರಲ್ಲೂ ಭಾರತ ತಂಡದ ಫೈನಲ್‌ ಭವಿಷ್ಯ ಇದೇ ಸರಣಿಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇರುವುದರಿಂದ ಎಲ್ಲರ ಚಿತ್ತ ಸರಣಿ ಮೇಲೆ ನೆಟ್ಟಿದೆ.ಆರ್‌ಸಿಬಿ ಮೂಲಕ ಬೆಂಗಳೂರಿನವರೇ ಆಗಿರುವ ವಿರಾಟ್‌ ಕೊಹ್ಲಿ, ಕನ್ನಡಿಗ ಕೆ.ಎಲ್‌.ರಾಹುಲ್‌, ನಾಯಕ ರೋಹಿತ್‌ ಶರ್ಮಾ ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

 ಕೊಹ್ಲಿ ಹಾಗೂ ರೋಹಿತ್‌ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಈ ಪಂದ್ಯದಲ್ಲಾದರೂ ಮಿಂಚಬಲ್ಲರೇ ಎಂಬ ಕುತೂಹಲವಿದೆ. ಕೊಹ್ಲಿ ಈ ವರ್ಷ 6 ಇನ್ನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ಬಾರಿಸಿಲ್ಲ. ಅತ್ತ ರೋಹಿತ್‌ 2024ರ 15 ಇನ್ನಿಂಗ್ಸ್‌ಗಳಲ್ಲಿ 2 ಶತಕ, 1 ಅರ್ಧಶತಕ ಸೇರಿ 497 ರನ್‌ ಗಳಿಸಿದ್ದಾರೆ. ಕೆ.ಎಲ್‌.ರಾಹುಲ್‌ ಕೂಡಾ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದು, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.ಗಿಲ್‌ ಗೈರು?: ಯುವ ಬ್ಯಾಟರ್‌ಗಳಾದ ಶುಭ್‌ಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅಭೂತಪೂರ್ವ ಲಯದಲ್ಲಿದ್ದು, ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಸ್ಕೋರ್‌ ಕಲೆಹಾಕಲು ಕಾಯುತ್ತಿದ್ದಾರೆ. 

ಗಿಲ್‌ ಕಳೆದ 10 ಇನ್ನಿಂಗ್ಸ್‌ಗಳಲ್ಲಿ 3 ಶತಕ ಬಾರಿಸಿದ್ದರೆ, ಜೈಸ್ವಾಲ್‌ 8 ಇನ್ನಿಂಗ್ಸ್‌ಗಳಲ್ಲಿ ಒಂದು ದ್ವಿಶತಕ, 5 ಅರ್ಧಶತಕ ಸಿಡಿಸಿದ್ದಾರೆ. ಆದರೆ ಗಿಲ್‌ ಕುತ್ತಿಗೆ ನೋವಿಗೆ ತುತ್ತಾಗಿದ್ದು, ಬುಧವಾರದ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳದಿದ್ದರೆ ಅವರ ಬದಲು ಸರ್ಫರಾಜ್‌ ಖಾನ್‌ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.

3 ವೇಗಿಗಳು ಅಥವಾ 3 ಸ್ಪಿನ್ನರ್ಸ್‌?: ಸಾಧಾರಣವಾಗಿ ಬೆಂಗಳೂರು ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತದೆ. ಆದರೆ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡ ಸ್ಪಿನ್ನರ್‌ಗಳ ವಿರುದ್ಧ ಅಕ್ಷರಶಃ ತತ್ತರಿಸಿ ಹೋಗಿತ್ತು. ತಂಡ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಪರದಾಡುತ್ತಿರುವ ಕಾರಣ ಭಾರತ ಈ ಪಂದ್ಯದಲ್ಲಿ ಹೆಚ್ಚುವರಿ ಸ್ಪಿನ್ನರ್‌ ಆಡಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 3 ವೇಗಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಜಸ್‌ಪ್ರೀತ್‌ ಬೂಮ್ರಾ, ಸಿರಾಜ್‌ ಜೊತೆ ಆಕಾಶ್‌ದೀಪ್‌ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಬಹುದು.

 ಅಲ್ಲದಿದ್ದರೆ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ಗೆ ಆಕಾಶ್‌ದೀಪ್‌ ಜಾಗ ಬಿಟ್ಟುಕೊಡಬೇಕಾಗಬಹುದು. ವಿಲಿಯಮ್ಸನ್‌ ಅಲಭ್ಯ: 2023-25ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್‌ ತಂಡ ಮೊದಲ ಟೆಸ್ಟ್‌ನಲ್ಲಿ ತಾರಾ ಆಟಗಾರ ಕೇನ್‌ ವಿಲಿಯಮ್ಸನ್‌ ಸೇವೆಯಿಂದ ವಂಚಿತವಾಗಲಿದೆ. 

ಕೇನ್‌ ಗಾಯಗೊಂಡ ಕಾರಣ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಜೊತೆಗೆ ವೇಗದ ಬೌಲರ್‌ ಬೆನ್‌ ಸೀರ್ಸ್‌ ಕೂಡಾ ಪಂದ್ಯದಿಂದ ಹೊರಬಿದ್ದಿದ್ದಾರೆ. ತಂಡವನ್ನು ಟಾಮ್ ಲೇಥಮ್‌ ಮುನ್ನಡೆಸಲಿದ್ದು, ವೇಗದ ಬೌಲರ್‌ ಟಿಮ್‌ ಸೌಥಿ, ಭಾರತ ವಿರುದ್ಧ ನಡೆದಿದ್ದ ಕೊನೆ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಪಡೆದಿದ್ದ ಸ್ಪಿನ್ನರ್‌ ಅಜಾಜ್‌ ಪಟೇಲ್‌, ಕರ್ನಾಟಕ ಮೂಲಕ ರಚಿನ್‌ ರವೀಂದ್ರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.ಒಟ್ಟು ಮುಖಾಮುಖಿ: 62ಭಾರತ: 22ನ್ಯೂಜಿಲೆಂಡ್‌: 13ಡ್ರಾ: 27

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಜೈಸ್ವಾಲ್, ಶುಭ್‌ಮನ್‌/ಸರ್ಫರಾಜ್, ವಿರಾಟ್‌, ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಜಡೇಜಾ, ಅಶ್ವಿನ್‌, ಆಕಾಶ್‌ದೀಪ್‌/ಕುಲ್ದೀಪ್‌, ಬೂಮ್ರಾ, ಸಿರಾಜ್‌.ನ್ಯೂಜಿಲೆಂಡ್‌: ಕಾನ್‌ವೇ, ಲೇಥಮ್‌(ನಾಯಕ), ವಿಲ್‌ ಯಂಗ್‌, ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಬ್ಲಂಡೆಲ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌/ಬ್ರೇಸ್‌ವೆಲ್‌, ಸೌಥಿ, ಅಜಾಜ್‌, ಒರೌರ್ಕೆಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ ಆ್ಯಪ್‌.