ಸಾರಾಂಶ
ಬೆಂಗಳೂರು ವೈಯಕ್ತಿಕ ಕಾರಣಗಳಿಂದ ಜಿಗುಪ್ಸೆಗೊಂಡು ತಾವು ನೆಲೆಸಿದ್ದ ಅಪಾರ್ಟ್‌ಮೆಂಟ್ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (54) ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.ಬೆಂಗಳೂರಿನ ಕೊತ್ತನೂರು ಸಮೀಪದ ಕನಕಶೀಲ ನಗರದ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಜಾನ್ಸನ್ ಅವರು, ತಮ್ಮ ಫ್ಲ್ಯಾಟ್ ಕಾರಿಡಾರ್‌ನಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಳಗೆ ಜಿಗಿದಿದ್ದಾರೆ. ಕೂಡಲೇ ಮನೆಯಲ್ಲಿದ್ದ ಮೃತರ ಕುಟುಂಬದವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಕೆಳಗೆ ಬಿದ್ದ ತೀವ್ರತೆಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ ಹಾಗೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಜಾನ್ಸನ್ ಅವರು, ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ನಗರದಲ್ಲಿ ಕ್ರಿಕೆಟ್ ತರಬೇತಿ ಅಕಾಡೆಮಿ ನಡೆಸುತ್ತಿದ್ದರು. ಈ ಮೊದಲು ದೊಡ್ಡಗುಬ್ಬಿ ಸಮೀಪ ನೆಲೆಸಿದ್ದ ಅವರು, ನಾಲ್ಕು ತಿಂಗಳ ಹಿಂದಷ್ಟೇ ಕನಕಶೀಲ ನಗರದ ಅಪಾರ್ಟ್‌ಮೆಂಟ್‌ಗೆ ಪತ್ನಿ ಹಾಗೂ ಮೂವರು ಮಕ್ಕಳ ಜತೆ ವಾಸ್ತವ್ಯ ಬದಲಾಯಿಸಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ಜಾನ್ಸನ್‌ರವರನ್ನು ಈ ಚಟ ಬಿಡಿಸುವ ಸಲುವಾಗಿ ಆರು ತಿಂಗಳ ಹಿಂದೆ ವ್ಯಸನ ಮುಕ್ತ ಕೇಂದ್ರಕ್ಕೆ ಕುಟುಂಬದವರು ದಾಖಲಿಸಿದ್ದರು. ಈ ನಡುವೆ ನಿರೀಕ್ಷಿತ ಮಟ್ಟದಲ್ಲಿ ಅಕಾಡೆಮಿ ನಡೆಯದ ಕಾರಣ ಅವರು ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಖಿನ್ನತೆಗೊಳಗಾಗಿದ್ದ ಜಾನ್ಸನ್ ಕೆಲ ದಿನಗಳಿಂದ ತಮ್ಮನ್ನು ಯಾರೋ ಸಾಯಿಸುತ್ತಾರೆ ಎಂದು ಅವರು ಗೋಳಾಡುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಬೆಳಗ್ಗೆ ಎದ್ದ ಜಾನ್ಸನ್, ಬೆಳಗ್ಗೆ 10 ಗಂಟೆ ಸುಮಾರಿಗೆ ಫ್ಲ್ಯಾಟ್‌ನಿಂದ ಹೊರಬಂದಿದ್ದಾರೆ. ಆಗ ಮೂರು ಅಡಿ ಎತ್ತರದ ಗ್ರೀಲ್ ಹತ್ತಿ ಕಾರಿಡಾರ್‌ನಿಂದ ಏಕಾಏಕಿ ಕೆಳಗೆ ಜಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸಹ ಡೆತ್ ನೋಟ್ ಪತ್ತೆಯಾಗಿಲ್ಲ. ವೈಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ನಿರ್ಧಾರಕ್ಕೆ ಜಾನ್ಸನ್ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯ ಕಾರಣ ಖಿನ್ನತೆ: ಕಳೆದ 2 ವರ್ಷಗಳಿಂದ ಜಾನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದರು. 2 ವರ್ಷ ಹಿಂದೆ ವೈರಲ್ ಜ್ವರಕ್ಕೆ ಪಡೆದಿದ್ದ ಚುಚ್ಚು ಮದ್ದಿನ ಅಡ್ಡಪರಿಣಾಮದಿಂದ ಅವರು ನಿಶಕ್ತರಾಗಿದ್ದರು. ಅವರ ಬೆನ್ನು, ಸೊಂಟ, ಕಾಲುಗಳಲ್ಲಿ ಶಕ್ತಿ ಇರಲಿಲ್ಲ. ಗಟ್ಟಿಯಾಗಿ ನಿಲ್ಲಲು ಸಹ ಅವರಿಂದ ಸಾಧ್ಯವಾಗುತ್ತಿರಲಿಲ್ಲ ಎಂದು ಅವರ ಸ್ನೇಹಿತರೊಬ್ಬರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಪದೇಪದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ, ಸಂಪೂರ್ಣ ಚೇತರಿಕೆ ಕಂಡಿರಲಿಲ್ಲ. ಒಂದು ವಾರದ ಹಿಂದೆಯೂ ಅವರು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಈ ಕಾರಣದಿಂದಾಗಿ ಬಹಳಷ್ಟು ನೊಂದಿದ್ದ ಜಾನ್ಸನ್, ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ. ತಮಗೆ ಜೀವನ ಸಾಕಾಗಿದ್ದು, ಬದುಕಲು ಇಚ್ಛೆ ಇಲ್ಲ ಎಂದು ತಮ್ಮ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಭಾರತ ಪರ 2 ಟೆಸ್ಟ್ ಆಡಿದ್ದ ಜಾನ್ಸನ್
ತಮ್ಮ ವೇಗದ ಬೌಲಿಂಗ್‌ನಿಂದ ದೇಸಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಜಾನ್ಸನ್, 1995-96ರ ರಣಜಿ ಟ್ರೋಫಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ 1996ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ತೆರಳಿ ಒಂದು ಪಂದ್ಯ ಆಡಿದ್ದರು. ಆದರೆ ಆ ನಂತರ ಅವರಿಗೆ ಅವಕಾಶ ಸಿಗಲಿಲ್ಲ.ಒಟ್ಟು 39 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಜಾನ್ಸನ್ 125 ವಿಕೆಟ್ ಪಡೆದಿದ್ದಾರೆ. ಅವರ ಹೆಸರಲ್ಲಿ ಒಂದು ಶತಕವೂ ದಾಖಲಾಗಿದೆ. 33 ಲಿಸ್ಟ್ ‘ಎ’ ಪಂದ್ಯಗಳಲ್ಲಿ 41 ವಿಕೆಟ್ ಪಡೆದಿರುವ ಜಾನ್ಸನ್, ಕೊನೆಯದಾಗಿ 2015ರ ಕೆಪಿಎಲ್‌ನಲ್ಲಿ ಆಡಿದ್ದರು.
ಕುಂಬ್ಳೆ, ತೆಂಡುಲ್ಕರ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ
ಜಾನ್ಸನ್ ನಿಧನಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಭಾರತ ಹಾಗೂ ಕರ್ನಾಟಕ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಗೌತಮ್ ಗಂಭೀರ್, ಭಾರತದ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೂಡ ಸಂತಾಪ ಸೂಚಿಸಿದೆ. ಭಾರತ ತಂಡದ ಆಟಗಾರರು ಗುರುವಾರ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))