ಸಾರಾಂಶ
ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬಗೆಗಿನ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದನ್ನು ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತವಾಗಿ ಘೋಷಿಸಿದ್ದಾರೆ.2021ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ರಾಹುಲ್ ದ್ರಾವಿಡ್ ಅವರ ಅವಧಿ ಟಿ20 ವಿಶ್ವಕಪ್‌ನೊಂದಿಗೆ ಮುಕ್ತಾಯಗೊಂಡಿದೆ. ಹೀಗಾಗಿ ಕೋಚ್ ಸ್ಥಾನಕ್ಕೆ ಮೇ 14ರಂದು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಈ ನಡುವೆ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಮಾರ್ಗದರ್ಶಕರಾಗಿದ್ದ ಗಂಭೀರ್ ಮುಖ್ಯ ಕೋಚ್ ಹುದ್ದೆಗೇರಲಿದ್ದಾರೆ ಎಂದು ವರದಿಯಾಗಿತ್ತು. ಇತ್ತೀಚೆಗಷ್ಟೇ ಗಂಭೀರ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದ ಬಿಸಿಸಿಐ, ಮಂಗಳವಾರ ಅವರನ್ನು ಅಧಿಕೃತವಾಗಿ ಹುದ್ದೆಗೆ ನೇಮಕ ಮಾಡಿದೆ. ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಸರಣಿ ಮೂಲಕ ಅವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, 2027ರ ಡಿ.31ರ ವರೆಗೂ ಅವಧಿ ಇರಲಿದೆ. 2003ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದ ಗಂಭೀರ್, 58 ಟೆಸ್ಟ್, 147 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದರು. 2016ರಲ್ಲಿ ಕೊನೆ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಮೊದಲ ಬಾರಿ ಕೋಚ್ಗಂಭೀರ್ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್ ಆಗಿದ್ದ ಅವರು, ಈ ಬಾರಿ ಕೆಕೆಆರ್ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿ ಕೋಚ್ ಹುದ್ದೆ ಸ್ವೀಕರಿಸಿದ್ದಾರೆ.
ಭಾರತದ ಅತಿ ಕಿರಿಯ ಕೋಚ್ಗಂಭೀರ್ ಭಾರತದ 25ನೇ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರು ಭಾರತದ ಅತಿ ಕಿರಿಯ ಕೋಚ್ ಎನಿಸಿಕೊಂಡಿದ್ದಾರೆ. ಗಂಭೀರ್‌ಗೆ ಈಗ 42 ವರ್ಷ.
ಭಾರತೀಯರ ಹೆಮ್ಮೆ ನನ್ನ ಗುರಿಭಾರತ ನನ್ನ ಗುರುತು ಮತ್ತು ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವ. ಟೀಂ ಇಂಡಿಯಾಕ್ಕೆ ಹಿಂದಿರುಗುತ್ತಿರುವುದಕ್ಕೆ ಸಂತೋಷವಿದೆ. ಎಲ್ಲಾ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದೇ ನನ್ನ ಗುರಿ. ಟೀಂ ಇಂಡಿಯಾ ಆಟಗಾರರು 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತುಕೊಂಡಿದ್ದಾರೆ. ಆ ಕನಸನ್ನು ನನಸಾಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.-ಗೌತಮ್ ಗಂಭೀರ್, ನೂತನ ಕೋಚ್