ಸಾರಾಂಶ
ಬೆಂಗಳೂರು : ಬಿಸಿಸಿಐ ಬಲವಂತಕ್ಕೆ ರಣಜಿ ಟ್ರೋಫಿ ಪಂದ್ಯವಾಡಿದ ಶುಭ್‌ಮನ್ ಗಿಲ್ ಶತಕ ಬಾರಿಸಿ ಸಮಾಧಾನಪಟ್ಟುಕೊಂಡರೂ, ತಾವು ಮುನ್ನಡೆಸಿದ ಪಂಜಾಬ್ ತಂಡವನ್ನು ಕರ್ನಾಟಕ ವಿರುದ್ಧ ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ತವರು ಮೈದಾನದಲ್ಲಿ ಅಮೋಘ ಗೆಲುವಿನೊಂದಿಗೆ ಬೋನಸ್ ಅಂಕ ಗಳಿಸಿರುವ ಕರ್ನಾಟಕ, ಎಲೈಟ್ ‘ಸಿ’ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದು ನಾಕೌಟ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಶುಕ್ರವಾರ 2 ವಿಕೆಟ್‌ಗೆ 24 ರನ್ ಗಳಿಸಿದ್ದ ಪಂಜಾಬ್, ಶನಿವಾರ 213 ರನ್‌ಗೆ ಆಲೌಟ್ ಆಯಿತು. ಗಿಲ್ ಹೊರತುಪಡಿಸಿ ಇನ್ನುಳಿದ ಯಾರೂ ದೊಡ್ಡ ಮೊತ್ತ ಗಳಿಸಲಿಲ್ಲ. 63.4 ಓವರಲ್ಲಿ ಪಂಜಾಬ್‌ನ 2ನೇ ಇನ್ನಿಂಗ್ಸ್ ಕೊನೆಗೊಂಡಿತು. ಯುವ ಆಲ್ರೌಂಡರ್ ಯಶೋವರ್ಧನ್, ಅನುಭವಿ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಕಿತ್ತರೆ, ಪ್ರಸಿದ್ಧ್ ಕೃಷ್ಣ 2, ಕೌಶಿಕ್ ಹಾಗೂ ಅಭಿಲಾಷ್ ತಲಾ 1 ವಿಕೆಟ್ ಪಡೆದರು.
2ನೇ ದಿನದಂತ್ಯಕ್ಕೆ 7 ರನ್ ಗಳಿಸಿದ್ದ ಶುಭ್‌ಮನ್ ಗಿಲ್, 3ನೇ ದಿನವಾದ ಶನಿವಾರ ಆ ಮೊತ್ತಕ್ಕೆ 95 ರನ್ ಸೇರಿಸಿದರು. 171 ಎಸೆತ ಎದುರಿಸಿದ ಗಿಲ್ 14 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 102 ರನ್ ಗಳಿಸಿ ಔಟಾದರು. ಮೊದಲ 50 ರನ್‌ಗೆ 119 ಎಸೆತ ತೆಗೆದುಕೊಂಡ ಗಿಲ್, ನಂತರದ 50 ರನ್‌ಗಳನ್ನು ಕೇವಲ 40 ಎಸೆತಗಳಲ್ಲಿ ಪೂರ್ತಿಗೊಳಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕೇವಲ 55 ರನ್‌ಗೆ ಆಲೌಟ್ ಆಗಿತ್ತು. ಬಳಿಕ ಆರ್.ಸ್ಮರಣ್‌ರ ಅಮೋಘ ದ್ವಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 475 ರನ್ ಗಳಿಸಿದ್ದ ಕರ್ನಾಟಕ, 420 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು.ಕರ್ನಾಟಕ vs ಹರ್ಯಾಣ
ಪಂದ್ಯ ಜ.30ರಿಂದ
ಗುಂಪು ಹಂತದಲ್ಲಿ ಕರ್ನಾಟಕಕ್ಕೆ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಆ ಪಂದ್ಯವು ಜ.30ರಿಂದ ಬೆಂಗಳೂರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ತಂಡ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಆ ಪಂದ್ಯದಲ್ಲೂ ಗೆಲ್ಲಬೇಕು. ಜೊತೆಗೆ ಇತರ ಫಲಿತಾಂಶಗಳು ಕರ್ನಾಟಕದ ಪರ ದಾಖಲಾಗಬೇಕು.