ದೇಶದ ಕ್ರೀಡಾಪಟುಗಳಿಗಿನ್ನು ಡಿಜಿಟಲ್‌ ಪ್ರಮಾಣ ಪತ್ರ

| Published : Mar 01 2024, 02:17 AM IST

ಸಾರಾಂಶ

ದೇಶದ ಕ್ರೀಡಾಪಟುಗಳಿಗೆ ಇನ್ಮುಂದೆ ಡಿಜಿಟಲ್‌ ಪ್ರಮಾಣ ಪತ್ರ ಸಿಗಲಿದೆ. ಜೂ.1ರಿಂದ ಈ ವ್ಯವಸ್ಥೆ ಜಾರಿ ಮಾಡುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ರಾಷ್ಟ್ರೀಯ, ರಾಜ್ಯ ಕೂಟಗಳಿಗೆ ಈ ನಿಯಮ ಅನ್ವಯವಾಗಲಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಈ ನಿರ್ಧಾರ ಎಂದು ಠಾಕೂರ್‌ ಹೇಳಿದ್ದಾರೆ.

ನವದೆಹಲಿ: ದೇಶದ ಕ್ರೀಡಾಪಟುಗಳಿಗೆ ಇನ್ನು ಡಿಜಿಟಲ್‌ ಸರ್ಟಿಫಿಕೇಟ್‌ ಸಿಗಲಿದೆ. ಎಲ್ಲಾ ರಾಷ್ಟ್ರೀಯ, ರಾಜ್ಯ ಮಟ್ಟದ ಕೂಟಗಳಲ್ಲಿ ಪಾಲ್ಗೊಳ್ಳುವ, ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಡಿಜಿ-ಲಾಕರ್‌ ಮೂಲಕವೇ ಪ್ರಮಾಣ ಪತ್ರ ವಿತರಿಸುವಂತೆ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ಎಸ್‌ಎಫ್‌)ಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೂಚಿಸಿದ್ದಾರೆ.ಈ ಬಗ್ಗೆ ಗುರುವಾರ ಸಾಮಾಜಿಕ ತಾಣಗಳಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಡಿಜಿಟಲ್‌ ಇಂಡಿಯಾದ ಭಾಗವಾಗಿ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.ಡಿಜಿಟಲ್‌ ಪ್ರಮಾಣ ಪತ್ರಗಳಲ್ಲಿ ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಂಡ ದಿನಾಂಕ, ವಿಭಾಗ, ಸ್ಥಾನ ಸೇರಿ ಎಲ್ಲಾ ಅಗತ್ಯ ಮಾಹಿತಿಗಳು ಇರಲಿವೆ. ಜೂ.1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಭೌತಿಕ ಪ್ರತಿಗಳನ್ನು ಯಾವುದೇ ಸರ್ಕಾರಿ ಸೌಲಭ್ಯಕ್ಕೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಏಪ್ರಿಲ್‌ ತಿಂಗಳಲ್ಲಿ ಎಲ್ಲಾ ಕ್ರೀಡಾ ಸಂಸ್ಥೆ, ಒಕ್ಕೂಟಗಳಿಗೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ತಂತ್ರಜ್ಞಾನದ ನೆರವು ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವಾಲಯ, ಮೇ 1ರಿಂದ ಒಂದು ತಿಂಗಳ ಕಾಲ ಸಿಬ್ಬಂದಿಗೆ ತರಬೇತಿ ನೀಡುವುದಾಗಿ ಮಾಹಿತಿ ನೀಡಿದೆ.ಡಿಜಿಟಲ್‌ ಸರ್ಟಿಫಿಕೇಟ್‌ ಏಕೆ?* ಕ್ರೀಡಾಪಟುಗಳು ರಾಷ್ಟ್ರೀಯ, ರಾಜ್ಯ ಮಟ್ಟದ ಕೂಟಗಳಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕೃತ ದಾಖಲೆಯಾಗಿ ಡಿಜಿಟಲ್‌ ಸರ್ಟಿಫಿಕೇಟ್‌ ಇರಲಿದೆ.* ಡಿಜಿಲಾಕರ್‌ನಲ್ಲಿ ಪ್ರಮಾಣ ಪತ್ರಗಳು ಸುರಕ್ಷಿತವಾಗಿ ಇರಲಿದ್ದು, ಕಳೆದು ಹೋಗುವುದು, ಹಾಳಾಗುವುದು, ಕಳವಾಗುವುದನ್ನು ತಪ್ಪಿಸಬಹುದು.* ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಸರ್ಕಾರಿ ಹಾಗೂ ಇತರ ಸೌಲಭ್ಯಗಳನ್ನು ಬಳಸಿಕೊಳ್ಳುವುದನ್ನು ತಪ್ಪಿಸಬಹುದು.* ಪ್ರಮಾಣ ಪತ್ರ ಪರಿಶೀಲನೆ ಕಾರ್ಯ ಸುಲಭ. ಕ್ರೀಡಾಪಟುಗಳಿಗೆ ತ್ವರಿತ ಸೌಲಭ್ಯ ಪಡೆಯಲು ಅನುಕೂಲ.* ಯಾವುದೇ ಸಂದರ್ಭದಲ್ಲೂ ಪ್ರಮಾಣ ಪತ್ರ ಲಭ್ಯವಿರಲಿದ್ದು, ಸೌಲಭ್ಯಗಳನ್ನು ಪಡೆಯುವಾಗ ಹತ್ತಾರು ಪ್ರತಿಗಳನ್ನು ಮಾಡಿಸುವುದನ್ನು ತಪ್ಪಿಸಬಹುದು.