43ರ ಬೋಪಣ್ಣಗೆ ಗ್ರ್ಯಾನ್‌ಸ್ಲಾಂ ಕಿರೀಟ!

| Published : Jan 28 2024, 01:20 AM IST / Updated: Jan 28 2024, 07:15 AM IST

43ರ ಬೋಪಣ್ಣಗೆ ಗ್ರ್ಯಾನ್‌ಸ್ಲಾಂ ಕಿರೀಟ!
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರ ಡಬಲ್ಸ್‌ನಲ್ಲಿ ಗ್ರ್ಯಾನ್‌ಸ್ಲಾಂ ಕಿರೀಟ ಗೆಲ್ಲುವ ಕರ್ನಾಟಕದ ರೋಹನ್‌ ಬೋಪಣ್ಣದ ದಶಕಗಳ ಕನಸು ಕೊನೆಗೂ ನನಸಾಗಿದೆ. ತಮ್ಮ 43ರ ಹರೆಯದಲ್ಲಿ ಬೋಪಣ್ಣ, ಆಸ್ಟ್ರೇಲಿಯಾದ ಎಬ್ಡೆನ್‌ ಜೋಡಿಯಾಗಿ ಪ್ರಶಸ್ತಿ ಜಯಿಸಿದ್ದಾರೆ.

ಮೆಲ್ಬರ್ನ್‌: ಪುರುಷರ ಡಬಲ್ಸ್‌ನಲ್ಲಿ ಗ್ರ್ಯಾನ್‌ಸ್ಲಾಂ ಕಿರೀಟ ಗೆಲ್ಲುವ ಕರ್ನಾಟಕದ ರೋಹನ್‌ ಬೋಪಣ್ಣದ ದಶಕಗಳ ಕನಸು ಕೊನೆಗೂ ನನಸಾಗಿದೆ. ತಮ್ಮ 43ರ ಹರೆಯಲ್ಲಿ ಬೋಪಣ್ಣ, ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್‌ ಇಟಲಿಯ ಸಿಮೋನ್‌ ಬೊಲೆಲ್ಲಿ-ಆ್ಯಂಡ್ರಿಯಾ ವವಸ್ಸೊರಿ ಜೋಡಿ ವಿರುದ್ಧ 7-6(7/0) 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

ಒಂದು ಗಂಟೆ 39 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಇಂಡೋ-ಆಸೀಸ್‌ ಜೋಡಿಗೆ ರೋಚಕ ಜಯಲಭಿಸಿತು.ಇದರೊಂದಿಗೆ ಗ್ರ್ಯಾನ್‌ಸ್ಲಾಂ ಕಿರೀಟ ಜಯಿಸಿದ ವಿಶ್ವದ ಅತಿ ಹಿರಿಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈ ಮೊದಲು ನೆದರ್‌ಲೆಂಡ್ಸ್‌ನ ಜೀನ್‌ ಜೂಲಿಯನ್‌ ರೋಜರ್‌ 2022ರಲ್ಲಿ ತಮ್ಮ 40ನೇ ವರ್ಷದಲ್ಲಿ ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

6 ಫೈನಲ್‌, 2 ಟ್ರೋಫಿಬೋಪಣ್ಣಗೆ ಇದು ಗ್ರ್ಯಾನ್‌ಸ್ಲಾಂನಲ್ಲಿ 2ನೇ ಟ್ರೋಫಿ. ಈ ಮೊದಲು 2017ರಲ್ಲಿ ಫ್ರೆಂಚ್‌ ಓಪನ್‌ ಮಿಶ್ರ ಡಬಲ್ಸ್‌ನಲ್ಲಿ ಕೆನಡಾದ ಗ್ಯಾಬ್ರಿಯೆಲಾ ಡಬ್ರೋಸ್ಕಿ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು. 

ಉಳಿದಂತೆ 2018, 2023ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಮಿಶ್ರ ಡಬಲ್ಸ್‌ ಫೈನಲ್‌, 2010, 2023ರಲ್ಲಿ ಯುಎಸ್‌ ಓಪನ್‌ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

4 ದಿನದಲ್ಲಿ ವಿಶ್ವ ನಂ.1,ಪದ್ಮಶ್ರೀ, ಗ್ರ್ಯಾನ್‌ಸ್ಲಾಂಬೋಪಣ್ಣ ಸದ್ಯ ಕನಸಿನ ಓಟದಲ್ಲಿದ್ದಾರೆ. ಜ.24ರಂದು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಖಚಿತಪಡಿಸಿಕೊಂಡಿದ್ದರು. 

ಜ.25ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಜ.27ರಂದು ಚೊಚ್ಚಲ ಬಾರಿ ಪುರುಷರ ಡಬಲ್ಸ್‌ ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡಿದ್ದಾರೆ.

4ನೇ ಭಾರತೀಯಬೋಪಣ್ಣ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆದ 4ನೇ ಭಾರತೀಯ ಎನಿಸಿಕೊಂಡರು. ಲಿಯಾಂಡರ್‌ ಪೇಸ್‌ 18, ಮಹೇಶ್ ಭೂಪತಿ 12, ಸಾನಿಯಾ ಮಿರ್ಜಾ 6 ಬಾರಿ ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದಿದ್ದಾರೆ.

ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಹೃದಯಂತರಾಳದ ಧನ್ಯವಾದಗಳು. ಇದೊಂದು ಕಠಿಣ ಪಯಣ. ಕೆಲ ವರ್ಷಗಳ ಹಿಂದೆ ನನ್ನ ಟೆನಿಸ್‌ ಬದುಕು ಅಂತ್ಯವಾಗಿತ್ತು ಅಂದುಕೊಂಡಿದ್ದೆ. 

ಆದರೆ ಕಠಿಣ ಪರಿಶ್ರಮದಿಂದ ಎಲ್ಲವೂ ಸಾಧ್ಯವಿದೆ. ಎಲ್ಲದಕ್ಕೂ ನಂಬಿಕೆ, ಆತ್ಮಿವಿಶ್ವಾಸ ಅಗತ್ಯ. 43 ಎಂಬುದು ವಯಸ್ಸು ಅಲ್ಲ. ನಾನೀನ ಕ್ರೀಡೆಯ 43ನೇ ಹಂತದಲ್ಲಿದ್ದೇನೆ.

ರೋಹನ್‌ ಬೋಪಣ್ಣ- ಆಸ್ಟ್ರೇಲಿಯನ್ ಓಪನ್‌ ಗೆದ್ದ ಬೋಪಣ್ಣಗೆ ಅಭಿನಂದನೆಗಳು. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ ಎಂಬುದನ್ನು ಬೋಪಣ್ಣ ಮತ್ತೆ ಮತ್ತೆ ನಿರೂಪಿಸಿದ್ದಾರೆ. 

ಅವರ ಅದ್ಭುತ ಟೆನಿಸ್‌ ಪಯಣವು ಕೌಶಲ್ಯ, ಕಠಿಣ ಪರಿಶ್ರಮ, ಸಾಮರ್ಥ್ಯವನ್ನು ವ್ಯಾಖ್ಯಾನಿಸುತ್ತದೆ. ಅವರ ಭವಿಷ್ಯ ಉಜ್ವಲವಾಗಿರಲಿ - ನರೇಂದ್ರ ಮೋದಿ, ಪ್ರಧಾನಿ