₹3.6 ಕೋಟಿಗೆ ಗುಜರಾತ್‌ ಟೈಟಾನ್ಸ್‌ಗೆ ಹರಾಜಾಗಿದ್ದ ರಾಬಿನ್‌ಗೆ ಅಪಘಾತ!

| Published : Mar 04 2024, 01:19 AM IST

ಸಾರಾಂಶ

ರಾಬಿನ್‌ಗೆ ಅಪಘಾತ ಆಗಿರುವುದನ್ನು ಸ್ವತಃ ಅವರ ತಂದೆ ಫ್ರಾನ್ಸಿಸ್ ಮಿನ್ಜ್‌ ಖಚಿತಪಡಿಸಿದ್ದಾರೆ. ಆದರೆ ರಾಬಿನ್‌ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಂಚಿ: ಇತ್ತೀಚೆಗಷ್ಟೇ ಐಪಿಎಲ್‌ ಹರಾಜಿನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ 3.6 ಕೋಟಿ ರು.ಗೆ ಹರಾಜಾಗಿದ್ದ ಯುವ ವಿಕೆಟ್‌ ಕೀಪರ್‌ ಆಟಗಾರ ರಾಬಿನ್‌ ಮಿನ್ಜ್‌ ಅಪಘಾತಕ್ಕೊಳಗಾಗಿದ್ದಾರೆ. ಇದನ್ನು ಸ್ವತಃ ಅವರ ತಂದೆ ಫ್ರಾನ್ಸಿಸ್ ಮಿನ್ಜ್‌ ಖಚಿತಪಡಿಸಿದ್ದಾರೆ. ಆದರೆ ರಾಬಿನ್‌ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯವರಾದ 21 ವರ್ಷದ ರಾಬಿನ್ ತಮ್ಮ ಕವಾಸಕಿ ಸೂಪರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ರಾಬಿನ್​ಗೆ ಹೆಚ್ಚಿನ ಗಾಯಗಳಾಗಿಲ್ಲ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಐಪಿಎಲ್ 2024ರ ಮೊದಲು ಗುಜರಾತ್ ಟೈಟಾನ್ಸ್‌ನ ತರಬೇತಿ ಶಿಬಿರವನ್ನು ಸೇರಬೇಕಾಗಿತ್ತು. ಆದರೆ ಅಪಘಾತದಿಂದಾಗಿ, ಅವರು ತಂಡವನ್ನು ಸೇರುವುದು ಈಗ ವಿಳಂಬವಾಗಬಹುದು. ಈ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ತಿಳಿದು ಬರಬೇಕಿದೆ.ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ ಮಿನಿ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 3.60 ಕೋಟಿ ರೂ. ಬೃಹತ್ ಮೊತ್ತವನ್ನು ನೀಡಿ ರಾಬಿನ್ ಮಿನ್ಜ್‌ ಅವರನ್ನು ತಂಡಕ್ಕೆ ಸೇರಿಸಿತ್ತು. ಇತ್ತೀಚೆಗೆ ರಾಬಿನ್ ಅವರು ಸಿಕೆ ನಾಯ್ದು ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಿದ್ದರು. ಅಲ್ಲಿ ಅವರು ಕರ್ನಾಟಕದ ವಿರುದ್ಧ 137 ರನ್ ಗಳಿಸಿದರು.