ಹಾರ್ದಿಕ್‌, ಕೃನಾಲ್‌ ಪಾಂಡ್ಯಗೆ ಮಲ ಸಹೋದರನಿಂದಲೇ ವಂಚನೆ. 4.3 ಕೋಟಿ ರು. ವಂಚಿಸಿ ಸಿಕ್ಕಿ ಬಿದ್ದಿರುವ ವೈಭವ್‌ ಪಾಂಡ್ಯ ಅರೆಸ್ಟ್‌. ಪಾಂಡ್ಯ ಬ್ರದರ್ಸ್‌ಗೆ ಭಾರಿ ಶಾಕ್‌.

ಮುಂಬೈ: ಕ್ರಿಕೆಟಿಗರಾದ ಹಾರ್ದಿಕ್‌ ಹಾಗೂ ಕೃನಾಲ್‌ ಪಾಂಡ್ಯಗೆ 4.3 ಕೋಟಿ ರು. ವಂಚಿಸಿದ ಆರೋಪದ ಮೇಲೆ ಅವರ ಮಲ ಸಹೋದರ ವೈಭವ್‌ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪಾಂಡ್ಯ ಸಹೋದರರ ಜೊತೆ 37 ವರ್ಷದ ವೈಭವ್‌ 3 ವರ್ಷಗಳ ಹಿಂದೆ ವ್ಯವಹಾರವೊಂದನ್ನು ಆರಂಭಿಸಿದ್ದರು. ಹಾರ್ದಿಕ್‌ ಹಾಗೂ ಕೃನಾಲ್‌ ತಲಾ 40%, ವೈಭವ್‌ 20% ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವೈಭವ್‌, ಪಾಂಡ್ಯ ಸಹೋದರರಿಗೆ ತಿಳಿಸದೆ ಮತ್ತೊಂದು ಸಂಸ್ಥೆ ಆರಂಭಿಸಿ ಹಣವನ್ನು ಆ ಸಂಸ್ಥೆಯ ಖಾತೆಗೆ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ.

ಇದಷ್ಟೇ ಅಲ್ಲ, ವೈಭವ್‌ ಪಾಂಡ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಹೋದರರಿಗೆ ತಿಳಿಯದಂತೆ ಪಾಲುದಾರಿಕೆಯಲ್ಲೂ ಕಳ್ಳಾಟವಾಡಿದ್ದಾರೆ. ಒಪ್ಪಂದದ ಪ್ರಕಾರ ವೈಭವ್‌ಗೆ ಸಿಗಬೇಕಿದಿದ್ದು ಶೇ.20ರಷ್ಟು ಲಾಭ. ಆದರೆ ಆತ ಶೇ.33ರಷ್ಟು ಲಾಭ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ.

ಈತನಿಂದ ಇನ್ನಷ್ಟು ಮೋಸ ಆಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಾರ್ದಿಕ್‌ ಹಾಗೂ ಕೃನಾಲ್‌ ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿಲ್ಲ.