ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ಬದಲು ಹಾರ್ದಿಕ್‌ ಪಾಂಡ್ಯ ನಾಯಕ!

| Published : Dec 16 2023, 02:00 AM IST

ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ಬದಲು ಹಾರ್ದಿಕ್‌ ಪಾಂಡ್ಯ ನಾಯಕ!
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈ ಇಂಡಿಯನ್ಸ್‌ಗೆ ಇನ್ಮುಂದೆ ರೋಹಿತ್‌ ಶರ್ಮಾ ಬದಲು ಹಾರ್ದಿಕ್‌ ಪಾಂಡ್ಯ ನಾಯಕ. 2024ರ ಐಪಿಎಲ್‌ ಹರಾಜಿಗೂ ಮುನ್ನ ಹೊಸ ನಾಯಕನನ್ನು ಘೋಷಿಸಿದ ಮುಂಬೈ ತಂಡ.

ನವದೆಹಲಿ: ಗುಜರಾತ್‌ ಟೈಟಾನ್ಸ್‌ ಬಿಟ್ಟು ಮುಂಬೈ ಇಂಡಿಯನ್ಸ್‌ಗೆ ಮರಳಿದ ಒಂದು ತಿಂಗಳೊಳಗೆ ಹಾರ್ದಿಕ್‌ ಪಾಂಡ್ಯ ಹೆಗಲಿಗೆ ಫ್ರಾಂಚೈಸಿಯು ನಾಯಕತ್ವದ ಭಾರ ಹೊರಿಸಿದೆ. 2024ರ ಐಪಿಎಲ್‌ನಲ್ಲಿ ತಂಡವನ್ನು ಹಾರ್ದಿಕ್‌ ಮುನ್ನಡೆಸಲಿದ್ದಾರೆ. ಮುಂದಿನ ಹಲವು ಆವೃತ್ತಿಗಳಿಗೆ ಪಾಂಡ್ಯ ಅವರೇ ಮುಂಬೈ ತಂಡದ ನಾಯಕರಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

2013-2023ರ ನಡುವೆ 5 ಐಪಿಎಲ್‌ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್‌ ಶರ್ಮಾ ಬದಲಿಗೆ ಫ್ರಾಂಚೈಸಿಯು ಹೊಸ ನಾಯಕನನ್ನು ನೇಮಿಸಿ, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಗಿದ್ದಾಗಿ ತಿಳಿಸಿದೆ. ಮುಂಬೈ ಇಂಡಿಯನ್ಸ್‌ನ ಜಾಗತಿಕ ಮುಖ್ಯಸ್ಥ ಮಹೇಲಾ ಜಯವರ್ಧನೆ, ಹಾರ್ದಿಕ್‌ರ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಈ ನಿರ್ಧಾರ ಪರಂಪರೆ ಬೆಳೆಸುವ ಭಾಗವಾಗಿದೆ. ಭವಿಷ್ಯದ ಸವಾಲುಗಳಿಗೆ ಸದಾ ಸಿದ್ಧರಾಗಿರಬೇಕು ಎನ್ನುವುದು ತಂಡದ ಧ್ಯೇಯ. ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಹಾರ್ದಿಕ್‌ಗೆ ನಾಯಕತ್ವ ನೀಡಲಾಗಿದೆ. ಮುಂಬೈ ತಂಡವು ಸಚಿನ್‌, ಹರ್ಭಜನ್‌, ಪಾಂಟಿಂಗ್‌, ರೋಹಿತ್‌ರಂತಹ ದಿಗ್ಗಜ ನಾಯಕರಡಿಯಲ್ಲಿ ಆಡಿ ಯಶಸ್ಸು ಕಂಡಿದೆ’ ಎಂದಿದ್ದಾರೆ. 2 ವರ್ಷಗಳ ಹಿಂದೆ ಐಪಿಎಲ್‌ಗೆ ಎರಡು ಹೊಸ ತಂಡಗಳು ಕಾಲಿಟ್ಟಾಗ ಗುಜರಾತ್‌ ಟೈಟಾನ್ಸ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಹಾರ್ದಿಕ್‌ರ ನಾಯಕತ್ವದಲ್ಲಿ ಆಡಿದ ಮೊದಲ ಪ್ರಯತ್ನದಲ್ಲೇ ಚಾಂಪಿಯನ್‌ ಆಗಿದ್ದ ಗುಜರಾತ್‌ ಟೈಟಾನ್ಸ್‌, 2023ರ ಐಪಿಎಲ್‌ನ ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ರೋಹಿತ್‌ ಬದಲು ಪಾಂಡ್ಯಗೆ ನಾಯಕತ್ವ ನೀಡಿದ್ದೇಕೆ?

ರೋಹಿತ್‌ ಶರ್ಮಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರು ಹೆಚ್ಚೆಂದರೆ ಇನ್ನು ಒಂದೆರಡು ಆವೃತ್ತಿಗಳಲ್ಲಿ ಆಡಬಹುದು. ಅವರು ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವಾಗಲೇ ಹೊಸ ನಾಯಕನನ್ನು ನೇಮಿಸಿ ತಂಡದ ಮೇಲೆ ಹೊಸ ನಾಯಕನಿಗೆ ಹಿಡಿತ ಸಿಗುವಂತೆ ನೋಡಿಕೊಳ್ಳುವ ಸಲುವಾಗಿ ಹಾರ್ದಿಕ್‌ರನ್ನು ತಂಡಕ್ಕೆ ಕರೆತಂದು ನಾಯಕತ್ವ ವಹಿಸಲಾಗಿದೆ. ಈ ಹಿಂದೆ ಚೆನ್ನೈ ದಿಢೀರನೆ ಜಡೇಜಾಗೆ ನಾಯಕತ್ವ ನೀಡಿ ಕೈಸುಟ್ಟುಕೊಂಡಿತ್ತು. ನಾಯಕತ್ವದ ಒತ್ತಡವನ್ನು ನಿಭಾಯಿಸಲು ಜಡೇಜಾರಿಂದ ಸಾಧ್ಯವಾಗಲಿಲ್ಲ. ಕೊನೆಗೆ ಮತ್ತೆ ಧೋನಿಯೇ ನಾಯಕತ್ವದ ಹೊಣೆ ಹೊರಬೇಕಾಯಿತು. ಸಿಎಸ್‌ಕೆಗೆ ಇನ್ನೂ ಧೋನಿಯ ಉತ್ತರಾಧಿಕಾರಿಯನ್ನು ಹುಡುಕಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳಬಾರದು ಎನ್ನುವ ಉದ್ದೇಶದಿಂದ ಮುಂಬೈ ತಂಡವು ಈಗಲೇ ರೋಹಿತ್‌ ಬದಲು ಹಾರ್ದಿಕ್‌ಗೆ ನಾಯಕತ್ವ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.