ಸಾರಾಂಶ
ಆಸ್ಟ್ರೇಲಿಯಾ ವಿರುದ್ಧ ಭಾರತ 2 ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿ ಸೋತಿದೆ. ಆದರೆ ನಾಯಕಿ ಹರ್ಮನ್ ಮಾತ್ರ 19ರ ಯುವ ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಅವರನ್ನು ಗುರಿಯಾಗಿಸಿ ಮಾತನಾಡಿದ್ದಾರೆ.
ನವ ಮುಂಬೈ: ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತದ ಸೋಲಿಗೆ ಕರ್ನಾಟಕದ 19ರ ಶ್ರೇಯಾಂಕ ಪಾಟೀಲ್‌ರನ್ನು ಹೊಣೆಯಾಗಿಸುವ ರೀತಿ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಭಾನುವಾರದ ಪಂದ್ಯದಲ್ಲಿ 130 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಆಸೀಸ್, ಶ್ರೇಯಾಂಕ ಪಾಟೀಲ್ ಎಸೆದ 19ನೇ ಓವರಲ್ಲಿ 17 ರನ್ ದೋಚಿ ಪಂದ್ಯ ಗೆದ್ದಿತ್ತು. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಹರ್ಮನ್, ‘19ನೇ ಓವರ್ ತನಕ ಪಂದ್ಯ ನಮ್ಮ ಕೈಯಲ್ಲಿತ್ತು. 19ನೇ ಓವರಲ್ಲಿ ಶ್ರೇಯಾಂಕ ರನ್ ನಿಯಂತ್ರಿಸಿದ್ದರೆ ಫಲಿತಾಂಶ ಬೇರೆ ಇರುತ್ತಿತ್ತು’ ಎಂದಿದ್ದಾರೆ. ಒಂದರ್ಥದಲ್ಲಿ ಪಂದ್ಯದ ಸೋಲಿಗೆ ಶ್ರೇಯಾಂಕ ಪಾಟೀಲ್ ಹೊಣೆ ಎಂದು ಹೇಳಿದ್ದಾರೆ.ಆದರೆ ಹರ್ಮನ್ ಮಾತಿಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಮನ್ ಸ್ವತಃ ಪಾರ್ಮ್‌ನಲ್ಲಿಲ್ಲ. ಆದರೆ ಸೋಲಿಗೆ19ರ ಶ್ರೇಯಾಂಕರನ್ನು ಗುರಿಯಾಗಿದ್ದಾರೆ. ಹತಾಶೆಯಿಂದ ಈ ರೀತಿ ಮಾತನಾಡುವ ಮೊದಲು ತಮ್ಮ ಕೊಡುಗೆ ಏನೆಂಬುದನ್ನು ಅರಿಯಲಿ. ಯುವ ಆಟಗಾರ್ತಿಯನ್ನು ‘ಹರಕೆಯ ಕುರಿ’ ಮಾಡುವುದು ನಾಯಕತ್ವ ಗುಣವಲ್ಲ. ಸ್ವತಃ ನಾಯಕಿಯಾಗಿದ್ದುಕೊಂಡು ಅವರು ಸರಣಿಯಲ್ಲಿ ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಬಿಟ್ಟು ಅವರು ಇನ್ನೂ ಕ್ರೀಡಾ ಬದುಕಿಗೆ ಕಾಲಿಡುತ್ತಿರುವ ಯುವ ಕ್ರಿಕೆಟರ್ ಶ್ರೇಯಾಂಕ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕುಟುಕಿದ್ದಾರೆ. ಅಂದಹಾಗೆ ಹರ್ಮನ್ ಈ ಸರಣಿಯ 5 ಪಂದ್ಯಗಳಲ್ಲಿ ಗಳಿಸಿದ್ದು ಒಟ್ಟು 23 ರನ್.