ಸಾರಾಂಶ
ಹ್ಯಾರಿ ಬ್ರೂಕ್ ನಿರ್ಗಮನದಿಂದಾಗಿ ಸದ್ಯ ಡೆಲ್ಲಿ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗರ್ಕ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ನವದೆಹಲಿ: ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ 17ನೇ ಆವೃತ್ತಿ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ಹರಾಜಿನಲ್ಲಿ 4 ಕೋಟಿ ರು.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಬ್ರೂಕ್ ವೈಯಕ್ತಿಕ ಕಾರಣಗಳಿಂದ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಡೆಲ್ಲಿ ಬದಲಿ ಆಟಗಾರನ ಹುಡುಕಾಟದಲ್ಲಿದ್ದು, ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗರ್ಕ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು, ಹರಾಜಿನಲ್ಲಿ ವಿವಿಧ ತಂಡಗಳಿಗೆ ಬಿಕರಿಯಾಗುವ ಆಟಗಾರರು ಕೊನೆ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿಯುವುದರ ವಿರುದ್ಧ ಐಪಿಎಲ್ ಫ್ರಾಂಚೈಸಿಗಳು ಗರಂ ಆಗಿದ್ದು, ಇದನ್ನು ತಡೆಯಲು ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.ಪಾದಾರ್ಪಣೆ ಮಾಡುವ ಅನುಭವ ಆಗ್ತಿದೆ: ರಿಷಭ್
ನವದೆಹಲಿ: ಭೀಕರ ಕಾರು ಅಪಘಾತದ 14 ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡುತ್ತಿರುವ ಯುವ ಕ್ರಿಕೆಟಿಗ ರಿಷಭ್ ಪಂತ್, ಪಾದಾರ್ಪಣೆ ಪಂದ್ಯ ಆಡುವ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಡೆಲ್ಲಿ ತಂಡದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕ್ರಿಕೆಟ್‌ಗೆ ಮರಳಲು ಉತ್ಸುಕನಾಗಿದ್ದೇನೆ. ಆದರೆ ಈಗ ಮತ್ತೊಮ್ಮೆ ಪಾದಾರ್ಪಣೆ ಮಾಡುವ ಅನುಭವ ಆಗುತ್ತಿದೆ. ಭಯಾನಕ ಅಪಘಾತದ ಬಳಿಕವೂ ನನಗೆ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿರುವುದು ಅದ್ಭುತ’ ಎಂದು ಪಂತ್ ಹೇಳಿದ್ದಾರೆ.