ಸಾರಾಂಶ
ನವದೆಹಲಿ: ಬರೋಬ್ಬರಿ ಒಂದು ವರ್ಷದ ಬಳಿಕ ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ತಾರಾ ವೇಗಿ ಮೊಹಮದ್ ಶಮಿ, ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಶಮಿ ಆಯ್ಕೆಯಾಗಿಲ್ಲ.
ಆದರೆ ಕಳೆದ ವಾರ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡಿದ್ದ ಶಮಿ, ಫಿಟ್ನೆಸ್ ಸಾಬೀತುಪಡಿಸಿದ್ದರು. ಹೀಗಾಗಿ ಶೀಘ್ರವೇ ಆಸೀಸ್‌ಗೆ ತೆರಳಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೇವಲ ಒಂದೇ ಪಂದ್ಯ ಆಡಿ ನೇರವಾಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳುವ ಬದಲು, ನ.23ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಂಗಾಳ ಪರ ಆಡುವಂತೆ ಬಿಸಿಸಿಐ ವೈದ್ಯಕೀಯ ತಂಡ, ಆಯ್ಕೆ ಸಮಿತಿ ಶಮಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಶಮಿ ಬದಲು ಈಗಾಗಲೇ ಮುಖ್ಯ ತಂಡದಲ್ಲಿರುವ ಹರ್ಷಿತ್ ರಾಣಾ ಮತ್ತು ಕರ್ನಾಟಕದ ಪ್ರಸಿದ್ಧ್ ಕೃಷ್ಣರನ್ನು ಆಸೀಸ್ ಸರಣಿಯಲ್ಲಿ 3ನೇ ವೇಗಿಯಾಗಿ ಆಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹರ್ಷಿತ್ ಈ ವರೆಗೂ ಕೇವಲ 10 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರೆ, ಪ್ರಸಿದ್ಧ್ ಭಾರತ ಪರ 2 ಟೆಸ್ಟ್ ಆಡಿದ್ದಾರೆ.