ಕ್ವಾರ್ಟರ್‌ ಫೈನಲ್‌ಗೇರುವ ರಾಜ್ಯದ ಕನಸು ಭಗ್ನ. ಹರ್ಯಾಣ ವಿರುದ್ಧ 1ನೇ ಇನ್ನಿಂಗ್ಸಲ್ಲಿ 304/10. ಫಾಲೋ ಆನ್‌ ತಪ್ಪಿಸಿಕೊಂಡು ಕ್ವಾರ್ಟರ್‌ಗೆ ಹರ್ಯಾಣ. ರಾಜ್ಯಕ್ಕೆ ಸಿಗಲ್ಲ ಇನ್ನಿಂಗ್ಸ್‌ ಜಯ. ಕ್ವಾರ್ಟರ್‌ಗೆ ಕೇರಳ ಲಗ್ಗೆ.

ಬೆಂಗಳೂರು : ಕರ್ನಾಟಕ ತಂಡ 2024-25ರ ರಣಜಿ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಗುಂಪು ಹಂತದಲ್ಲೇ ಕೊನೆಗೊಳಿಸಲಿದೆ. ಹರ್ಯಾಣ ವಿರುದ್ಧ ಇಲ್ಲಿ ನಡೆಯುತ್ತಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ರಾಜ್ಯಕ್ಕೆ ಇನ್ನಿಂಗ್ಸ್‌ ಜಯದ ಅಗತ್ಯವಿತ್ತು. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ 304 ರನ್‌ಗೆ ಆಲೌಟ್‌ ಕರ್ನಾಟಕ, ಹರ್ಯಾಣವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ವಿಫಲವಾದ ಕಾರಣ, ನಾಕೌಟ್‌ಗೇರುವ ಕನಸು ಭಗ್ನಗೊಂಡಿದೆ.

ಕರ್ನಾಟಕ ಇನ್ನಿಂಗ್ಸ್‌ ಗೆಲುವು ಸಾಧಿಸಬೇಕಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಹರ್ಯಾಣ ಮೇಲೆ ಫಾಲೋ ಆನ್‌ ಹೇರಬೇಕಿತ್ತು ಅಥವಾ 10 ವಿಕೆಟ್‌ ಜಯ ಅಗತ್ಯವಿತ್ತು. ಈ ಎರಡೂ ಸಾಧ್ಯವಾಗದ ಕಾರಣ, ರಾಜ್ಯ ತಂಡ ಗುಂಪು ಹಂತದಲ್ಲೇ ಹೊರಬೀಳಲಿದೆ. ‘ಸಿ’ ಗುಂಪಿನಿಂದ ಹರ್ಯಾಣ ಹಾಗೂ ಕೇರಳ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದಿವೆ.

ಬಿಹಾರ ವಿರುದ್ಧದ ಪಂದ್ಯದಲ್ಲಿ ಕೇರಳ ಇನ್ನಿಂಗ್ಸ್‌ ಹಾಗೂ 169 ರನ್‌ ಜಯ ಸಾಧಿಸಿ, 7 ಪಂದ್ಯಗಳಲ್ಲಿ 28 ಅಂಕ ಕಲೆಹಾಕಿತು. ಒಂದು ವೇಳೆ ಹರ್ಯಾಣ ಕರ್ನಾಟಕ ವಿರುದ್ಧ ಗೆದ್ದರೆ, ಅಥವಾ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದು ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಕಾಲಿಡಲಿದೆ. ಕರ್ನಾಟಕ ಈ ಪಂದ್ಯವನ್ನು ಗೆದ್ದರೂ, ಗುಂಪಿನಲ್ಲಿ 3ನೇ ಸ್ಥಾನಿಯಾಗೇ ಉಳಿಯಲಿದೆ. 2ನೇ ದಿನ ರಾಜ್ಯ 37 ರನ್‌: ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 267 ರನ್‌ ಗಳಿಸಿದ್ದ ಕರ್ನಾಟಕ, 2ನೇ ದಿನವಾದ ಶುಕ್ರವಾರ ಆ ಮೊತ್ತಕ್ಕೆ ಕೇವಲ 37 ರನ್‌ ಸೇರಿಸಿ ಉಳಿದ 5 ವಿಕೆಟ್‌ ಕಳೆದುಕೊಂಡಿತು.

ಸಾಧಾರಣ ಮೊತ್ತ ದಾಖಲಿಸಿದ ಬಳಿಕ ಕರ್ನಾಟಕ ತನ್ನ ಬೌಲರ್‌ಗಳಿಂದ ಅಸಾಧಾರಣ ಪ್ರದರ್ಶನ ನಿರೀಕ್ಷಿಸಿತು. ಆದರೆ, ನಾಯಕ ಅಂಕಿತ್‌ ಕುಮಾರ್‌ರ ಅಮೋಘ ಶತಕ ಹರ್ಯಾಣಕ್ಕೆ ಆಸರೆಯಾಯಿತು. ಆರಂಭಿಕನಾಗಿ ಆಡಿದ ಅಂಕಿತ್‌, 154 ಎಸೆತದಲ್ಲಿ 118 ರನ್‌ ಗಳಿಸಿದರು. ಹರ್ಯಾಣ ದಿನದಂತ್ಯಕ್ಕೆ 5 ವಿಕೆಟ್‌ಗೆ 232 ರನ್‌ ಗಳಿಸಿದ್ದು, ಇನ್ನು 72 ರನ್‌ ಹಿನ್ನಡೆಯಲ್ಲಿದೆ. ಸ್ಕೋರ್‌: ಕರ್ನಾಟಕ 304/10 (ಶ್ರೀಜಿತ್‌ 37, ಯಶೋವರ್ಧನ್‌ 35, ಅನ್ಶುಲ್‌ 4-32, ಅನುಜ್‌ 4-88), ಹರ್ಯಾಣ (2ನೇ ದಿನಕ್ಕೆ) 232/5 (ಅಂಕಿತ್‌ 118, ನಿಶಾಂತ್‌ 35*, ಯಶೋವರ್ಧನ್‌ 2-42)

2015-16ರ ಬಳಿಕ ಮೊದಲ ಸಲ ನಾಕೌಟ್‌ಗಿಲ್ಲ ಕರ್ನಾಟಕ!

ಕರ್ನಾಟಕ ತಂಡ 9 ವರ್ಷಗಳಲ್ಲಿ ಮೊದಲ ಬಾರಿಗೆ ನಾಕೌಟ್‌ ಹಂತಕ್ಕೇರಲು ವಿಫಲವಾಗಿದೆ. 2013-14, 2014-15ರಲ್ಲಿ ಚಾಂಪಿಯನ್‌ ಆಗಿದ್ದ ಕರ್ನಾಟಕ 2015-16ರಲ್ಲಿ ನಾಕೌಟ್‌ಗೇರಲು ವಿಫಲವಾಗಿತ್ತು. ಆದರೆ 2016-17ರ ಋತುವಿನಿಂದ 2023-24ರ ವರೆಗೂ ಪ್ರತಿ ಬಾರಿಯೂ ನಾಕೌಟ್‌ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಗೆಲ್ಲಲಾಗಲಿಲ್ಲ.