ರಣಜಿ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಿತ್ತ ಹರ್ಯಾಣದ ಯುವ ವೇಗಿ ಅನ್ಶುಲ್‌ ಕಾಂಬೋಜ್‌!

| Published : Nov 16 2024, 12:32 AM IST / Updated: Nov 16 2024, 04:19 AM IST

ಸಾರಾಂಶ

ಟೂರ್ನಿಯ ಇತಿಹಾಸದಲ್ಲೇ ಈ ಸಾಧನೆ ಮಾಡಿದ 3ನೇ ಬೌಲರ್‌ ಎಂಬ ಖ್ಯಾತಿಗೆ ಅನ್ಶುಲ್‌ ಪಾತ್ರರಾಗಿದ್ದಾರೆ. ಒಟ್ಟಾರೆ ಅನ್ಶುಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 6ನೇ ಬೌಲರ್‌

ಲಾಹ್ಲಿ(ಹರ್ಯಾಣ): ಹರ್ಯಾಣದ ಯುವ ವೇಗಿ ಅನ್ಶುಲ್‌ ಕಾಂಬೋಜ್‌ ರಣಜಿ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕೇರಳ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಅನ್ಶುಲ್‌ ಪಡೆದಿದ್ದು, ಟೂರ್ನಿಯ ಇತಿಹಾಸದಲ್ಲೇ ಈ ಸಾಧನೆ ಮಾಡಿದ 3ನೇ ಬೌಲರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೊದಲ ದಿನ 8 ವಿಕೆಟ್‌ ಕಿತ್ತಿದ್ದ 23 ವರ್ಷದ ಅನ್ಶುಲ್‌, ಶುಕ್ರವಾರ ಉಳಿದ ಎರಡೂ ವಿಕೆಟ್‌ಗಳನ್ನು ಎಗರಿಸಿದರು. ಅವರು 30.1 ಓವರ್‌ ಎಸೆದು 49 ರನ್‌ ನೀಡಿದರು. ಇದಕ್ಕೂ ಮುನ್ನ 1956ರಲ್ಲಿ ಬೆಂಗಾಲ್‌ನ ಪ್ರೇಮಾನ್ಶು ಚಟರ್ಜಿ, ಅಸ್ಸಾಂ ವಿರುದ್ಧ ಹಾಗೂ 1985ರಲ್ಲಿ ರಾಜಸ್ಥಾನದ ಪ್ರದೀಪ್‌ ಸುಂದರಮ್‌, ವಿದರ್ಭ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಪಡೆದಿದ್ದರು. 

ಅನ್ಶುಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 6ನೇ ಬೌಲರ್‌. ದಿಗ್ಗಜ ಸ್ಪಿನ್ನರ್‌ ಅನಿಲ್‌ ಕುಂಬ್ಳೆ, ಸುಭಾಶ್‌ ಗುಪ್ತೆ ಹಾಗೂ ದೇಬಾಶಿಶ್‌ ಮೋಹಂತಿ ಕೂಡಾ ಇನ್ನಿಂಗ್ಸ್‌ನ 10 ವಿಕೆಟ್‌ ಪಡೆದಿದ್ದಾರೆ. 

ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ, ಬಾಂಬೆ ತಂಡದ ಸುಭಾಶ್‌ 1954-55ರಲ್ಲಿ ಪಾಕಿಸ್ತಾನ ಸರ್ವಿಸಸ್‌ ಹಾಗೂ ಬಹವಾಲ್ಪುರ XI ವಿರುದ್ಧ 3 ದಿನಗಳ ಪಂದ್ಯದಲ್ಲಿ 10 ವಿಕೆಟ್‌ ಪಡೆದಿದ್ದರು. ದೇಬಾಶಿಶ್‌ 2000-01ರಲ್ಲಿ ದುಲೀಪ್‌ ಟ್ರೋಫಿ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಪಂದ್ಯದಲ್ಲಿ ಪೂರ್ವ ವಲಯ ಪರ 10 ವಿಕೆಟ್‌ ಕಿತ್ತಿದ್ದರು.