ಸಾರಾಂಶ
ನವದೆಹಲಿ: ದೇಸಿ ಕ್ರಿಕೆಟ್ ಆಡದ್ದಕ್ಕೆ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್‌ರನ್ನು ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟರೂ ಹಾರ್ದಿಕ್ ಪಾಂಡ್ಯರನ್ನು ಸೇರಿಸಿಕೊಂಡಿದ್ದಕ್ಕೆ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್ ಟೀಕೆ ವ್ಯಕ್ತಪಡಿಸಿದ್ದು, ಹಾರ್ದಿಕ್ ಚಂದ್ರಲೋಕದಿಂದ ಇಳಿದು ಬಂದವರೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರವೀಣ್, ‘ಹಾರ್ದಿಕ್ ದೇಸಿ ಕ್ರಿಕೆಟ್ ಆಡದಿದ್ದರೂ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅವರಿಗೆ ಬೇರೆ ನಿಯಮ ಇದೆಯೇ? ಆಡಲೇಬೇಕೆಂದು ಹಾರ್ದಿಕ್‌ಗೆ ಬಿಸಿಸಿಐ ಸೂಚಿಸಬೇಕಿತ್ತು. ಕೇವಲ ದೇಸಿ ಟಿ20 ಲೀಗ್‌ಗಳಲ್ಲಿ ಆಡಿದರೆ ಸಾಕೆ? ಆಡುವುದಿದ್ದರೆ ಎಲ್ಲಾ ಮೂರು ಮಾದರಿಯಲ್ಲೂ ಆಡಲಿ.
ದೇಶ, ರಾಜ್ಯದ ಪರ ಆಡದೆ ನೇರವಾಗಿ ಐಪಿಎಲ್‌ನಲ್ಲಿ ಆಡುತ್ತಾರೆ. ಈಗ ಎಲ್ಲರೂ ಐಪಿಎಲ್‌ಗೆ ಹೆಚ್ಚಿನನ ಆದ್ಯತೆ ಕೊಡುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ತಂಡದಿಂದ ಹೊರಗುಳಿದ ಹೊರತಾಗಿಯೂ ದೇಸಿ ಕ್ರಿಕೆಟ್‌ನಲ್ಲಿ ಆಡದ ಕಾರಣಕ್ಕೆ ಶ್ರೇಯಸ್, ಇಶಾನ್‌ರನ್ನು ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿತ್ತು.
ಆದರೆ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಆ ಬಳಿಕ ರಾಷ್ಟ್ರೀಯ, ರಾಜ್ಯ ತಂಡದ ಪರ ಆಡದಿದ್ದರೂ ಗುತ್ತಿಗೆ ಪಟ್ಟಿಯಲ್ಲಿ ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದರು.