ಟ್ರೋಫಿ ಗೆಲ್ಲಬೇಕಿದ್ದರೆ ಕೊಹ್ಲಿ ಆರ್‌ಸಿಬಿಯನ್ನು ಬಿಡಲಿ: ಕೆವಿನ್ ಪೀಟರ್‌ಸನ್‌

| Published : May 24 2024, 12:46 AM IST / Updated: May 24 2024, 04:21 AM IST

ಟ್ರೋಫಿ ಗೆಲ್ಲಬೇಕಿದ್ದರೆ ಕೊಹ್ಲಿ ಆರ್‌ಸಿಬಿಯನ್ನು ಬಿಡಲಿ: ಕೆವಿನ್ ಪೀಟರ್‌ಸನ್‌
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತಿಗೂ ಮುನ್ನ ಒಮ್ಮೆಯಾದರೂ ಕೊಹ್ಲಿ ಕಪ್‌ ಎತ್ತಿಹಿಡಿಯಲು ಅರ್ಹರು. ಹೀಗಾಗಿ ಕೊಹ್ಲಿ ಆರ್‌ಸಿಬಿ ತೊರೆಯಲಿ’ ಎಂದು ಪೀಟರ್‌ಸನ್‌ ಹೇಳಿಕೆ ನೀಡಿದ್ದಾರೆ.

ನವದೆಹಲಿ: ವಿರಾಟ್‌ ಕೊಹ್ಲಿ ಐಪಿಎಲ್‌ ಟ್ರೋಫಿ ಗೆಲ್ಲಬೇಕಿದ್ದರೆ ಆರ್‌ಸಿಬಿ ತಂಡ ಬಿಡಬೇಕು ಎಂದು ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌ ಹೇಳಿದ್ದಾರೆ. 

ಈ ಬಗ್ಗೆ ಸ್ಟಾರ್‌ಸ್ಪೋರ್ಟ್‌ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಿಗ್ಗಜ ಫುಟ್ಬಾಲ್‌ ಆಟಗಾರರನ್ನು ಉಲ್ಲೇಖಿಸಿ ಕೊಹ್ಲಿಗೆ ಸಲಹೆ ನೀಡಿದರು. ‘ಮೆಸ್ಸಿ, ರೊನಾಲ್ಡೋ, ಬೆಕ್‌ಹ್ಯಾಮ್‌, ಹ್ಯಾರಿ ಕೇನ್‌ ಸೇರಿ ಎಲ್ಲರೂ ತಮ್ಮ ನೆಚ್ಚಿನ ತಂಡಗಳನ್ನು ತೊರೆದಿದ್ದಾರೆ. 

ವಿರಾಟ್‌ ಆರ್‌ಸಿಬಿಯನ್ನ ಉನ್ನತ ಮಟ್ಟಕ್ಕೇರಿಸಿದ್ದಾರೆ. ಅವರೂ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಿವೃತ್ತಿಗೂ ಮುನ್ನ ಒಮ್ಮೆಯಾದರೂ ಕೊಹ್ಲಿ ಕಪ್‌ ಎತ್ತಿಹಿಡಿಯಲು ಅರ್ಹರು. 

ಹೀಗಾಗಿ ಕೊಹ್ಲಿ ಆರ್‌ಸಿಬಿ ತೊರೆಯಲಿ’ ಎಂದು ಹೇಳಿದ್ದಾರೆ. ಕೊಹ್ಲಿ 2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ತಂಡ 3 ಬಾರಿ ಫೈನಲ್‌ಗೇರಿದ್ದರೂ ರನ್ನರ್‌-ಅಪ್‌ ಸ್ಥಾನಿಯಾಗಿತ್ತು. ವಿರಾಟ್‌ ಈ ವರೆಗೂ ಆರ್‌ಸಿಬಿ ಪರ 252 ಪಂದ್ಯಗಳನ್ನು ಆಡಿದ್ದಾರೆ. ಅವರು ಐಪಿಎಲ್‌ ಇತಿಹಾಸದಲ್ಲೇ 8000 ರನ್‌ ಪೂರ್ಣಗೊಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ 29 ರನ್‌ ಗಳಿಸಿದಾಗ ಕೊಹ್ಲಿ ಈ ಮಹತ್ವದ ಮೈಲುಗಲ್ಲು ತಲುಪಿದರು. ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್‌ ಸಿಡಿಸಿ ಔಟಾದ ಕೊಹ್ಲಿ, ಈ ಬಾರಿ ಐಪಿಎಲ್‌ನ ರನ್ ಗಳಿಕೆಯನ್ನು 741ಕ್ಕೆ ಹೆಚ್ಚಿಸಿದರು. ಒಟ್ಟಾರೆ ಐಪಿಎಲ್‌ನಲ್ಲಿ ಅವರ ರನ್‌ ಸದ್ಯ 8004. 38.66ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ಅವರ ಸ್ಟ್ರೈಕ್‌ರೇಟ್‌ 131.97. ಅವರು ಐಪಿಎಲ್‌ನಲ್ಲಿ 8 ಶತಕ, 55 ಅರ್ಧಶತಕ ಸಿಡಿಸಿದ್ದಾರೆ.