ರಾಷ್ಟ್ರೀಯ ಕಿರಿಯರ ಫುಟ್ಬಾಲ್‌: ಕರ್ನಾಟಕ ರನ್ನರ್‌-ಅಪ್‌

| Published : May 23 2024, 01:03 AM IST / Updated: May 23 2024, 04:16 AM IST

ಸಾರಾಂಶ

ಅಂಡರ್‌-20 ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕಕ್ಕೆ ಭಾರಿ ನಿರಾಸೆ. ಪೆನಾಲ್ಟಿ ಶೂಟೌಟ್‌ನಲ್ಲಿ ಡೆಲ್ಲಿ ವಿರುದ್ಧ ಸೋಲು. ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಎತ್ತಿಹಿಡಿಯುವ ರಾಜ್ಯದ ಕನಸು ಭಗ್ನ.

ನರೈನ್‌ಪುರ(ಛತ್ತೀಸ್‌ಗಢ): ಚೊಚ್ಚಲ ಆವೃತ್ತಿಯ ಸ್ವಾಮಿ ವಿವೇಕಾನಂದ ಅಂಡರ್‌-20 ಪುರುಷರ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಬುಧವಾರ ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ರಾಜ್ಯ ತಂಡ ಡೆಲ್ಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 6-7 ಗೋಲುಗಳಿಂದ ವೀರೋಚಿತ ಸೋಲು ಕಂಡಿತು.ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ ಇತ್ತಂಡಗಳು ಫೈನಲ್‌ನಲ್ಲೂ ಪ್ರಬಲ ಪೈಪೋಟಿ ನಡೆಸಿದವು.

ನಿಗದಿತ 90 ನಿಮಿಷಗಳ ಆಟ ಮುಕ್ತಾಯಕ್ಕೆ ಇತ್ತಂಡಗಳು 2-2 ಗೋಲು ಗಳಿಸಿದ್ದವು. ನಂತರ 120+12 ನಿಮಿಷಗಳ ಆಟದ ಬಳಿಕ 3-3 ಗೋಲುಗಳಿಂದ ಸಮಗೊಂಡ ಕಾರಣ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಶೂಟೌಟ್‌ನಲ್ಲಿ ಕರ್ನಾಟಕ 3 ಗೋಲು ಬಾರಿಸಿದರೆ, ಡೆಲ್ಲಿ ತಂಡ 4 ಪ್ರಯತ್ನದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಕರ್ನಾಟಕ ತಂಡದ ಸ್ಯಾಮ್ ಜಾರ್ಜ್‌ ಟೂರ್ನಿಯ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನರಾದರು.