ಥಾಮಸ್‌, ಊಬರ್‌ ಕಪ್‌: ಭಾರತ ತಂಡಗಳಿಗೆ ಕ್ವಾರ್ಟರಲ್ಲಿ ಸೋಲು

| Published : May 03 2024, 01:00 AM IST / Updated: May 03 2024, 04:09 AM IST

ಸಾರಾಂಶ

ಚೊಚ್ಚಲ ಬಾರಿ ಊಬರ್‌ ಕಪ್‌ ಗೆಲ್ಲುವ ಮಹಿಳಾ ತಂಡದ ಕನಸೂ ಭಗ್ನಗೊಂಡಿತು. ಕ್ವಾರ್ಟರ್‌ನಲ್ಲಿ ಜಪಾನ್‌ ವಿರುದ್ಧ 0-3 ಅಂತರದಲ್ಲಿ ಸೋಲನುಭವಿಸಿತು.

ಚೆಂಗ್ಡು(ಚೀನಾ): ಥಾಮಸ್‌ ಹಾಗೂ ಊಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿವೆ.ಸತತ 2ನೇ ಬಾರಿ ಥಾಮಸ್‌ ಕಪ್‌ ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಭಾರತ ಪುರುಷರು, ಗುರುವಾರ ಚೀನಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡರು. 

ಸಿಂಗಲ್ಸ್‌ನಲ್ಲಿ ಪ್ರಣಯ್ ಸೋತರೆ, ಡಬಲ್ಸ್‌ನಲ್ಲಿ ವಿಶ್ವ ನಂ.3 ಸಾತ್ವಿಕ್‌-ಚಿರಾಗ್‌ ಶೆಟ್ಟಿ ಸೋತರು. ಬಳಿಕ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಗೆದ್ದರೂ, 4ನೇ ಪಂದ್ಯದಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಸೋಲುವುದರೊಂದಿಗೆ ಭಾರತ ಟೂರ್ನಿಯಿಂದ ಹೊರಬಿತ್ತು.ಮತ್ತೊಂದೆಡೆ ಚೊಚ್ಚಲ ಬಾರಿ ಊಬರ್‌ ಕಪ್‌ ಗೆಲ್ಲುವ ಮಹಿಳಾ ತಂಡದ ಕನಸೂ ಭಗ್ನಗೊಂಡಿತು. ಟೂರ್ನಿಯ ಇತಿಹಾಸದಲ್ಲೇ 3 ಬಾರಿ ಸೆಮೀಸ್‌ಗೇರಿದ್ದ ಭಾರತ, ಗುರುವಾರ ಕ್ವಾರ್ಟರ್‌ನಲ್ಲಿ ಜಪಾನ್‌ ವಿರುದ್ಧ 0-3 ಅಂತರದಲ್ಲಿ ಸೋಲನುಭವಿಸಿತು. ಸಿಂಗಲ್ಸ್‌ನಲ್ಲಿ ಅಶ್ಮಿತಾ, ಇಶಾರಾಣಿ, ಡಬಲ್ಸ್‌ನಲ್ಲಿ ಪ್ರಿಯಾ-ಶ್ರುತಿ ಪರಾಭವಗೊಂಡರು.

ಭಾರತ ಮಹಿಳಾ ಹಾಕಿಗೆ ಸಲೀಮಾ ಹೊಸ ನಾಯಕಿ

ನವದೆಹಲಿ: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಬೆಲ್ಜಿಯಂ ಹಾಗೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರಮುಖ ಪಂದ್ಯಗಳಿಗೂ ಮುನ್ನ ಭಾರತ ಮಹಿಳಾ ಹಾಕಿ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ. 

ಟೂರ್ನಿಗೆ 24 ಆಟಗಾರ್ತಿಯರ ತಂಡ ಪ್ರಕಟಿಸಲಾಗಿದ್ದು, ಸವಿತಾ ಪೂನಿಯಾ ಬದಲು ಸಲೀಮಾ ಟೇಟೆಗೆ ನಾಯಕತ್ವ ವಹಿಸಲಾಗಿದೆ. ನವ್‌ನೀತ್‌ ಕೌರ್‌ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಗೋಲ್‌ಕೀಪರ್‌ ಆಗಿರುವ ಸವಿತಾ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ಹಾಗೂ ತವರಿನಲ್ಲಿ ನಡೆದ ಪ್ರೊ ಲೀಗ್ ಪಂದ್ಯಗಳಿಗೆ ಭಾರತದ ನಾಯಕತ್ವ ವಹಿಸಿದ್ದರು. ಸದ್ಯ ಭಾರತ ಪ್ರೊ ಲೀಗ್‌ನಲ್ಲಿ 8 ಪಂದ್ಯಗಳಲ್ಲಿ 8 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.