ಸಾರಾಂಶ
ಇಸ್ಲಾಮಾಬಾದ್: 60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಿರುವ ಭಾರತ ಡೇವಿಸ್ ಕಪ್ ಟೆನಿಸ್ ತಂಡಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಭಾನುವಾರ ರಾತ್ರಿ ಭಾರತದ ಐವರು ಆಟಗಾರರು, ತಲಾ ಇಬ್ಬರು ಫಿಸಿಯೋಗಳು ಹಾಗೂ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ಅಧಿಕಾರಿಗಳು ಇಸ್ಲಾಮಾಬಾದ್ ತಲುಪಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವ ಗುಂಪು-1ರ ಪ್ಲೇ-ಆಫ್ ಪಂದ್ಯ ಫೆ.3, 4ರಂದು ನಡೆಯಲಿದೆ.ಭಾರತ ತಂಡಕ್ಕೆ ವಿವಿಐಪಿ ದರ್ಜೆಯ, ನಾಲ್ಕರಿಂದ ಐದು ಹಂತಗಳಲ್ಲಿ ಭದ್ರತೆ ನೀಡಲಾಗುತ್ತಿದೆ. ಪಂದ್ಯಗಳು ನಡೆಯಲಿರುವ ಕ್ರೀಡಾಂಗಣವನ್ನು ಪ್ರತಿ ದಿನವೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಲಿದ್ದು, ಆ ಬಳಿಕವಷ್ಟೇ ಪ್ರತಿಯೊಬ್ಬರನ್ನೂ ಒಳಕ್ಕೆ ಬಿಡಲಾಗುತ್ತದೆ. ಆಟಗಾರರು ತೆರಳುವ ವಾಹನಗಳ ಅಕ್ಕಪಕ್ಕದಲ್ಲಿ ಭದ್ರತಾ ವಾಹನಗಳು ಇರಲಿದ್ದು, ಝೀರೋ ಟ್ರಾಫಿಕ್ ಮೂಲಕ ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ. ಇಸ್ಲಾಮಾಬಾದ್ ನಗರದಲ್ಲಿ ಸುಮಾರು 10000 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪಾಕಿಸ್ತಾನ ವಾಯು ಸೇನೆಯೂ ಇಡೀ ನಗರದ ಮೇಲೆ ಕಣ್ಣಿಡಲಿದೆ ಎಂದು ಭದ್ರತಾ ವ್ಯವಸ್ಥೆಯ ಮುಖ್ಯಸ್ಥ ಕರ್ನಲ್ ಗುಲ್ ರೆಹಮಾನ್ ತಿಳಿಸಿದ್ದಾರೆ.